Connect with us

Chikkamagaluru

ಕಾಫಿನಾಡಲ್ಲಿ ಪ್ರವಾಸಿಗರ ದಂಡು – ಮಾಸ್ಕ್ ಹಾಕಿಲ್ಲ, ಸಾಮಾಜಿಕ ಅಂತರವೂ ಇಲ್ಲ

Published

on

ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 50ಕ್ಕೆ ಏರಿದೆ. ಆದರೆ ಜಿಲ್ಲೆಗೆ ಯಾವ ಆತಂಕವೂ ಇಲ್ಲದೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ಅಧಿಕ ಸಂಖ್ಯೆಯ ಪ್ರವಾಸಿಗರನ್ನ ಕಂಡ ಜಿಲ್ಲೆಯ ಜನ ಎಲ್ಲಿ ನಮಗೂ ಕೊರೊನಾ ಬರುತ್ತೋ ಎಂದು ಕಂಗಾಲಾಗಿದ್ದಾರೆ.

ಇಂದು ಭಾನುವಾರ ಆಗಿರುವುದರಿಂದ ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ ಭಾಗಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಇಂದು ಬೆಳಗ್ಗೆ 5 ಗಂಟೆಯಿಂದ ಪ್ರವಾಸಿಗರ ವಾಹನಗಳು ಚಿಕ್ಕಮಗಳೂರಿನ ಕೈಮರ ಚೆಕ್ ಪೋಸ್ಟ್ ಬಳಿ ಸಾಲುಗಟ್ಟಿ ನಿಂತಿದ್ದವು. ಕೈಮರ ಚೆಕ್ ಪೋಸ್ಟ್ ನಿಂದ ಸಿರಿ ಕಾಫಿವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಧಿಕ ಪ್ರಮಾಣದ ಪ್ರವಾಸಿಗರನ್ನು ಕಂಡ ಸ್ಥಳಿಯರು ಭಯಭೀತರಾಗಿದ್ದಾರೆ.

ಗಿರಿಭಾಗದಲ್ಲೂ ಮುಖಕ್ಕೆ ಮಾಸ್ಕ್ ಧರಿಸದೆ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳದೆ ಪ್ರವಾಸಿಗರು ಬೇಜವಾಬ್ದಾರಿತನ ತೋರಿಸಿದ್ದಾರೆ. ಇದನ್ನ ಕಂಡ ಜನ ಕೆಲವರಿಗೆ ತಿಳಿ ಹೇಳಿದ್ದಾರೆ. ಆದರೆ ಪ್ರವಾಸಿಗರು ಯಾವುದನ್ನೂ ಲೆಕ್ಕಿಸದೆ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆಗುಡ್ಡದಲ್ಲೂ ಪ್ರವಾಸಿಗರ ಸಂಖ್ಯೆ ಅಧಿಕವಾಗಿದ್ದು, ಗಿರಿಪ್ರದೇಶದಲ್ಲಿ ಪ್ರವಾಸಿಗರ ವರ್ತನೆಗೆ ಸ್ಥಳೀಯರು ಹೈರಾಣಾಗಿದ್ದಾರೆ.

ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುತ್ತಿರುವ ಪ್ರವಾಸಿಗರನ್ನ ಕಂಡ ಜನ ಸರ್ಕಾರ ಕೂಡಲೇ ಪ್ರವಾಸಿಗರನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿದ್ದಾರೆ. ಕೆಲವರು ದಿನಕಳೆದಂತೆ ಕೊರೊನಾ ಹೆಚ್ಚಾಗುತ್ತಿದೆ. ಲಾಕ್‍ಡೌನ್ ಫ್ರೀ ಆಗಿರುವುದರಿಂದ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜನರ ಆರೋಗ್ಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ಸರ್ಕಾರ ಮತ್ತೆ ಲಾಕ್‍ಡೌನ್ ಮಾಡಲಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.