Wednesday, 16th October 2019

Recent News

ಸಂಧಾನದ ಮೂಲಕವೇ ಅಯೋಧ್ಯೆ ವಿವಾದ ಬಗೆಹರಿಸಿಕೊಳ್ಳಿ- ಸುಪ್ರೀಂ ಕೋರ್ಟ್

– ಸಂಧಾನಕ್ಕೆ 2 ತಿಂಗಳ ಗಡುವು

ನವದೆಹಲಿ: ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕವೇ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದಲ್ಲಿ ಸಂಧಾನ ನಡೆಯಲಿದ್ದು, ಸಂಧಾನ ಪ್ರಕ್ರಿಯೆ ರಹಸ್ಯವಾಗಿರಬೇಕು. ಯಾವುದೇ ಕಾರಣಕ್ಕೂ ಸೋರಿಕೆಯಾಗಬಾರದು ಎಂದು ಸುಪ್ರೀಂ ಆದೇಶ ನೀಡಿದೆ. ಮೂವರು ಸಂಧಾನಕಾರರ ಹೆಸರನ್ನು ಈಗಾಗಲೇ ಅಖಿಲ ಭಾರತ ಹಿಂದೂ ಮಹಾಸಭಾ ಶಿಫಾರಸು ಮಾಡಿದೆ. ಮಾಜಿ ಸಿ.ಜೆ.ಐ ನ್ಯಾ. ದೀಪಕ್ ಮಿಶ್ರಾ, ನ್ಯಾ. ಜೆ. ಎಸ್ ಖೆಹರ್, ಹಾಗೂ ನ್ಯಾ. ಎ.ಕೆ ಪಟ್ನಾಯಕ್ ಹೆಸರನ್ನು ಕೊಟ್ಟಿದೆ. ಆದ್ರೆ ನಿರ್ಮೋಹಿ ಅಖಾರದಿಂದ ಇನ್ನು ಕೂಡ ಮೂವರ ಹೆಸರು ಶಿಫಾರಸು ಆಗಬೇಕಾಗಿದೆ. ಹೀಗಾಗಿ ಒಟ್ಟು ಆರು ಮಂದಿಯ ನೇತೃತ್ವವನ್ನು ಖಲೀಫುಲ್ಲಾ ವಹಿಸಿಕೊಳ್ಳಲಿದ್ದಾರೆ.

ಇನ್ನೊಂದು ವಾರದಲ್ಲಿ ಸಂಧಾನ ಪ್ರಕ್ರಿಯೆ ಶುರುವಾಗಬೇಕು ಹಾಗೂ 2 ತಿಂಗಳ ಒಳಗೆ ಸಂಧಾನ ಪ್ರಕ್ರಿಯೆ ಅಂತ್ಯವಾಗಬೇಕು. ಉತ್ತರ ಪ್ರದೇಶದ ಫೈಜಾಬಾದ್ ನಲ್ಲಿ ಸಂಧಾನ ಮಾತುಕತೆ ನಡೆಸಿ ಇನ್ನೊಂದು ತಿಂಗಳಲ್ಲಿ ಸಂಧಾನದ ಫಲಶೃತಿ ಬಗ್ಗೆ ನಮಗೆ ಹೇಳಬೇಕು ಎಂದು ಖಲೀಫುಲ್ಲಾ ಸಂಧಾನಕಾರರ ತಂಡಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಸೂಚಿಸಿದೆ.

ಸಂಧಾನಕಾರರನ್ನು ನೇಮಿಸುವ ಸಂಬಂಧ ವಾದ-ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇದು ಕೇವಲ ಭೂ ವಿವಾದ ಮಾತ್ರವಲ್ಲ. ಜಾತಿ ಧರ್ಮಗಳ ಭಾವನೆಗಳಿಗೆ ಸಂಬಂಧಿಸಿದ ವಿಚಾರ. ಇತಿಹಾಸವನ್ನು ನಾವು ಬದಲಿಸಲು ಆಗಲ್ಲ. ಸದ್ಯ ಇರೋ ವಿವಾದವನ್ನು ನಾವು ಪರಿಗಣಿಸಬೇಕಾಗುತ್ತೆ. ಸಮಸ್ಯೆ ಬಗೆಹರಿಸಬೇಕಾಗುತ್ತೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದರು.

ಹಿಂದೂ ಸಂಘಟನೆಗಳ ವಾದವೇನಿತ್ತು..?
ಸಂಧಾನದ ಮೂಲಕ ವಿವಾದ ಇತ್ಯರ್ಥವಾಗುವ ಭರವಸೆ ಇಲ್ಲ. ಇದು ಕೇವಲ ಸಾಮಾನ್ಯ ಭೂವ್ಯಾಜ್ಯವಲ್ಲ. ವಿವಾದಿತ ಜಾಗ ಹಿಂದೂಗಳ ಭಾವನಾತ್ಮಕ, ನಂಬಿಕೆ ವಿಷಯವಾಗಿದೆ. ಇದು ಶ್ರೀರಾಮಚಂದ್ರನ ಜನ್ಮಭೂಮಿ ಅನ್ನೋದರ ಬಗ್ಗೆ ಅನುಮಾನವಿಲ್ಲ. 1950ರಿಂದಲೂ ತೀರ್ಪಿಗಾಗಿ ಕಾಯುತ್ತಿದ್ದೇವೆ. ಹೀಗಾಗಿ ಮಧ್ಯಸ್ಥಿಕೆಗೆ ನಮ್ಮ ಒಪ್ಪಿಗೆ ಇಲ್ಲ. ಭೂಮಿಯನ್ನು ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಈ ಹಿಂದೆಯೇ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಯತ್ನ ನಡೆದಿತ್ತು. ಆದ್ರೆ ಆಗ ಮುಸ್ಲಿಂ ಸಂಘಟನೆಗಳು ವಿರೋಧಿಸಿದ್ದವು. ಹೀಗಾಗಿ ಸಂಧಾನದಿಂದ ಸಮಸ್ಯೆ ಇತ್ಯರ್ಥ ಸಾಧ್ಯವಿಲ್ಲ ಎಂದು ಹಿಂದೂ ಸಂಘಟನೆಗಳು ವಾದಿಸಿದ್ದವು.


ಮುಸ್ಲಿಂ ವಕ್ಫ್ ಬೋರ್ಡ್ ಹೇಳಿದ್ದೇನು..?
ಮಧ್ಯಸ್ಥಿಕೆ ಮೂಲಕ ವಿವಾದ ಇತ್ಯರ್ಥಕ್ಕೆ ಒಪ್ಪಿಗೆ ಇದೆ. ಆದ್ರೆ ಸಂಧಾನ ಸಂಪೂರ್ಣವಾಗಿ ಗೌಪ್ಯವಾಗಿರಬೇಕು. ಮಧ್ಯಸ್ಥಿಕೆ ಪ್ರಕ್ರಿಯೆ ಮುಗಿಯೋವರೆಗೆ ಮಾಹಿತಿ ಸೋರಿಕೆಯಾಗಬಾರದು. ಈ ಬಗ್ಗೆ ಸುದ್ದಿ ಬಿತ್ತರಕ್ಕೆ ನಿರ್ಬಂಧ ಹೇರಬೇಕು. ಸಂಧಾನ ಪ್ರಕ್ರಿಯೆ ಸಾಮರಸ್ಯದಿಂದ ನಡೆಯಬೇಕು. 2.7 ಎಕರೆ ಪ್ರದೇಶವಷ್ಟೇ ವಿವಾದಿತ ಸ್ಥಳವಾಗಿದೆ. ಹೀಗಾಗಿ ಮಧ್ಯಸ್ಥಿಕೆವೊಂದೇ ಪರಿಹಾರದ ಮಾರ್ಗ ಎಂದು ವಕ್ಫ್ ಬೋರ್ಡ್ ಹೇಳಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *