Connect with us

Bengaluru City

ಹಿರಿಯ ರಾಜಕೀಯ ಮುತ್ಸದ್ಧಿ ದೇವೇಗೌಡರ ಹುಟ್ಟುಹಬ್ಬಕ್ಕೆ ಗಣ್ಯರಿಂದ ಶುಭಾಶಯ

Published

on

ಬೆಂಗಳೂರು: ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರು 88ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು “ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಆಯಸ್ಸು ಮತ್ತು ಆರೋಗ್ಯವನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.

“ಭಾರತದ ಪ್ರಧಾನಮಂತ್ರಿಗಳಾಗಿ, ಕರ್ನಾಟಕದ ಮುಖ್ಯಮಂತ್ರಿಗಳಾಗಿ ಮಹತ್ವದ ಸೇವೆ ಸಲ್ಲಿಸಿರುವ, ಜನತಾದಳ (ಜಾತ್ಯತೀತ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ರಾಜಕೀಯ ಮುತ್ಸದ್ಧಿ ಸನ್ಮಾನ್ಯ ಎಚ್.ಡಿ ದೇವೇಗೌಡ ರವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಕಾಮನೆಗಳು. ದೇವರ ಅನುಗ್ರಹ ತಮ್ಮ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ತಂದೆಗೆ ಟ್ವಿಟ್ಟರ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. “ದೇಶದ ಅತ್ಯುನ್ನತ, ಅಸಾಮಾನ್ಯ ಹುದ್ದೆಯನ್ನು ಸಾಮಾನ್ಯನೂ ಅಲಂಕರಿಸಬಹುದು ಎಂಬುದು ಭಾರತದ ಪ್ರಜಾಪ್ರಭುತ್ವದ ಸೌಂದರ್ಯ. ಈ ಮಾತನ್ನು, ಹಳ್ಳಿಯ ಮಣ್ಣಿಂದ ಬಂದು, ರಾಷ್ಟ್ರೀಯ ಪಕ್ಷದ ಹಿನ್ನೆಲೆ ಇಲ್ಲದೇ ಸಾಧಿಸಿ ತೋರಿಸಿದವರು ದೇವೇಗೌಡರು. ಬದ್ಧತೆ, ಛಲ, ಪರಿಶ್ರಮ, ಹೋರಾಟ ಮತ್ತು ನಾಡಿಗೆ ಹೆಗ್ಗುರುತಾಗಿರುವ ಅವರ ಜನ್ಮದಿನಕ್ಕೆ ಶುಭಾಶಯಗಳು” ಎಂದು ವಿಶ್ ಮಾಡಿದ್ದಾರೆ.

“ದೇಶದ ಹಿರಿಯ ರಾಜಕೀಯ ಮುತ್ಸದ್ಧಿಗಳು, ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ದೇಶದ ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯ ನೀಡಲಿ” ಸಚಿವ ಶ್ರೀರಾಮು ಶುಭಾ ಹಾರೈಸಿದ್ದಾರೆ. ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಶುಭ ಕೋರಿದ್ದಾರೆ.

ಎಚ್.ಡಿ ದೇವೇಗೌಡ ಅವರು ಹುಟ್ಟುಹಬ್ಬಕ್ಕೂ ಮೊದಲೇ ಮನೆಯ ಬಳಿ ಬಾರದಂತೆ ಅಭಿಮಾನಿಗಳು, ನಾಯಕರು, ಕಾರ್ಯಕರ್ತರಿಗೆ ಸಂದೇಶ ರವಾನೆ ಮಾಡಿದ್ದರು. ದೇಶದಲ್ಲಿ ಲಾಕ್‍ಡೌನ್ ನಿಯಮಗಳು ನಡೆಯುತ್ತಿವೆ. ನಿಯಮಗಳನ್ನು ಮೀರುವುದನ್ನ ನಾನು ಒಪ್ಪುವುದಿಲ್ಲ. ಒಂದು ವಾರದಿಂದ ಕೊರೊನಾ ಸೋಂಕು ಹೆಚ್ಚಾಗಿರುವುದು ನನ್ನನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಹೀಗಾಗಿ ನೀವು ಇದ್ದ ಕಡೆಯಿಂದಲೇ ನನಗೆ ಶುಭಾಶಯ ತಿಳಿಸಿ. ಯಾರೂ ಮನೆಯ ಬಳಿ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

ಮೇ 18ರಂದು ಹೂಗುಚ್ಚಗಳೊಂದಿಗೆ ಬಂದು ಶುಭ ಹಾರೈಸುವ ಬದಲು ಕೊರೊನಾ ಸಂಕಷ್ಟ ಪೀಡಿತರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರೂ ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತರಾಗಿರೋಣ ಎಂದು ಹೆಚ್‍ಡಿಡಿ ಹೇಳಿದ್ದರು.