Karnataka
ಭಕ್ತೆಯನ್ನು 6 ಕಿ.ಮೀ ಹೆಗಲಲ್ಲಿ ಹೊತ್ತು ಸಾಗಿದ ಪೊಲೀಸ್ ಪೇದೆ

ಹೈದರಾಬಾದ್: ತಿರುಮಲ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರಲ್ಲಿ ಒಬ್ಬರು ಮೂರ್ಛೆ ಹೋಗಿದ್ದರ. ಇವರನ್ನು ಪೊಲೀಸ್ ಪೇದೆಯೊಬ್ಬರು ಸುಮಾರು 6 ಕಿಲೋಮೀಟರ್ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ಅವರನ್ನು ಶೇಖ್ ಅರ್ಷದ್ ಎಂದು ಗುರುತಿಸಲಾಗಿದೆ. ಅರ್ಷದ್ ಅವರು ಪಾದಯಾತ್ರೆ ಹೊರಟಿರುವ ವೇಳೆ ದಣಿದು ಮೂರ್ಛೆ ಹೋಗಿದ್ದ ಮಹಿಳೆಯನ್ನು 6 ಕಿಲೋಮೀಟರ್ಗಳಷ್ಟು ದೂರ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.
ತಿರುಮಲ ತಿಮ್ಮಪ್ಪನ ಬಾಲಾಜಿ ದೇವಸ್ಥಾನಕ್ಕೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಬರಿಗಾಲಿನಲ್ಲಿ ನಡೆದುಕೊಂಡು ದೇವರ ದರ್ಶನಕ್ಕೆ ಹೋಗುತ್ತಾರೆ. ಹೀಗಿರುವಾಗ ಬುಧವಾರದಂದು ಕೆಲವು ಭಕ್ತರು ಬರಿಗಾಲಿನಿಂದ ಬೆಟ್ಟವನ್ನು ಹತ್ತುತ್ತಿದ್ದರು. ಈ ವೇಳೆ ಇಬ್ಬರು ಭಕ್ತರು ಬರಿಗಾಲಿನಲ್ಲಿ ಬೆಟ್ಟ ಹತ್ತುವಾಗ ತುಂಬಾ ದಣಿದಿದ್ದರು. ಗುರುಪುರ ಪದಂ ಎಂಬ ಸ್ಥಳದಲ್ಲಿ ಬಂದು ನಾಗವೇರಮ್ಮ ಎಂಬವರು ಬಿಪಿಯಿಂದಾಗಿ ಮೂರ್ಛೆ ಹೋದಾಗ ಕರ್ತವ್ಯದಲ್ಲಿದ್ದ ಕಾನ್ ಸ್ಟೇಬಲ್ ಅರ್ಷದ್ ಮಹಿಳೆಯನ್ನ ರಕ್ಷಿಸಿದ್ದಾರೆ.
ಪಕ್ಕಾ ರಸ್ತೆ ಇಲ್ಲದ ಕಾರಣ ಅರಣ್ಯ ಮಾರ್ಗದಲ್ಲೇ ಸುಮಾರು 6 ಕಿಲೋಮೀಟರ್ ದೂರ ಅರ್ಷದ್ ಮಹಿಳೆಯನ್ನು ಹೆಗಲ ಮೇಲೆ ಎತ್ತಿಕೊಂಡು ನಡೆದುಕೊಂಡು ಹೋಗಿದ್ದಾರೆ. ನಂತರ ಮಹಿಳೆಯನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಮೊದಲು ಅರ್ಷದ್ ಅವರು ನಾಗೇಶ್ವರ ರಾವ್ ಎಂಬ ಮತ್ತೊಬ್ಬರು ಹಿರಿಯರನ್ನು ಇದೇ ಅರಣ್ಯ ರಸ್ತೆಯ ಮೂಲಕ ಕರೆದುಕೊಂಡು ಹೋಗಿದ್ದರು. ಇಬ್ಬರೂ ಭಕ್ತರಿಗೂ ಅರ್ಷದ್ ಸಲ್ಲಿಸಿದ ಸೇವೆಗೆ ತಿಮ್ಮಪ್ಪನ ಭಕ್ತರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.
