Saturday, 14th December 2019

Recent News

ತಾಲೂಕು ಘೋಷಿಸಿ 8 ತಿಂಗಳು ಕಳೆದಿದ್ರೂ ಹಾರೋಹಳ್ಳಿಗೆ ಸಿಕ್ಕಿಲ್ಲ ಪ್ರಗತಿ ಭಾಗ್ಯ

ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿಯವರ ತವರು ಕ್ಷೇತ್ರ ರಾಮನಗರದ ಹಾರೋಹಳ್ಳಿ ಹೋಬಳಿಯ ಅಭಿವೃದ್ದಿಗಾಗಿ ಕಳೆದ ಬಜೆಟ್‍ನಲ್ಲಿ ಗ್ರಾಮ ಪಂಚಾಯತ್ ಅನ್ನು ತಾಲೂಕಾಗಿ ಘೋಷಣೆ ಮಾಡಿದ್ದರು. ಹಾರೋಹಳ್ಳಿ ತಾಲೂಕಾಗಿ ಘೋಷಣೆಯಾಗಿ ಎಂಟು ತಿಂಗಳುಗಳೇ ಕಳೆದಿದ್ದರೂ ತಾಲೂಕು ಎಂದೆನಿಸಿಕೊಳ್ಳಲು ಪ್ರಗತಿ ಮಾತ್ರ ಶೂನ್ಯವಾಗಿದೆ. ತಾಲೂಕಿನ ಬಗ್ಗೆ ಸರ್ಕಾರ ಅಧಿಸೂಚನೆ ಸಹ ನೀಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಸಿಎಂ ಆಗಿದ್ದ ಕುಮಾರಸ್ವಾಮಿಯವರ ಬಜೆಟ್‍ನಲ್ಲಿ ರಾಮನಗರ ಜಿಲ್ಲೆಯ ಜನರಿಗೆ ಅಚ್ಚರಿ ಕಾದಿತ್ತು. ಸಾತನೂರು ಹೋಬಳಿಯನ್ನ ತಾಲೂಕಾಗಿ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಗೆ ಬದಲಾಗಿ ಅನಿರೀಕ್ಷಿತವಾಗಿ ಹಾರೋಹಳ್ಳಿ ಹೋಬಳಿಯನ್ನ ತಾಲೂಕಾಗಿ ಘೋಷಣೆ ಮಾಡಲಾಗಿತ್ತು. ಅದು ಕೂಡಾ ಗ್ರಾಮ ಪಂಚಾಯತ್‍ನ್ನ ತಾಲೂಕಾಗಿ ಘೋಷಣೆ ಮಾಡಿದ್ದು ಸಾಕಷ್ಟು ಚರ್ಚೆಗೂ ಕೂಡಾ ಗ್ರಾಸವಾಗಿತ್ತು. ಆದರೆ ತಾಲೂಕಾಗಿ ಘೋಷಣೆಯಾಗಿ 8 ತಿಂಗಳೇ ಕಳೆದಿದ್ದರೂ ಯಾವುದೇ ಪ್ರಗತಿಯ ಬೆಳವಣಿಗೆ ಮಾತ್ರ ನಡೆದಿಲ್ಲ. ಅಷ್ಟೇ ಏಕೆ ಜಿಲ್ಲಾಡಳಿತದಿಂದ ತಾಲೂಕಾಗಿ ಮೇಲ್ದರ್ಜೆಗೆ ಏರಿಸಿ ಪೂರಕವಾಗಿ ಕಚೇರಿ ಹಾಗೂ ವಾತಾವರಣ ಕಲ್ಪಿಸಲು ಸರ್ಕಾರದಿಂದ ಇಲ್ಲಿಯ ತನಕ ಯಾವುದೇ ಅಧಿಸೂಚನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಾ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸುಮ್ಮನಾಗಿರೋದು ಹಾರೋಹಳ್ಳಿ ತಾಲೂಕು ಹೋರಾಟ ಸಮಿತಿಯ ಹೋರಾಟಗಾರರನ್ನು ಸಿಡಿದೆಬ್ಬಿಸಿದೆ.

ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಏಷ್ಯಾದ ದೊಡ್ಡ ಕೈಗಾರಿಕಾ ಪ್ರದೇಶ ಹೊಂದಿರುವ ಹೆಗ್ಗಳಿಕೆಯನ್ನ ಹೊಂದಿದೆ. ಕಳೆದ ಬಜೆಟ್‍ನಲ್ಲಿ ಎಚ್‍ಡಿಕೆಯವರು ತಮ್ಮ ಕ್ಷೇತ್ರದ ಋಣ ತೀರಿಸಲು ಹಾರೋಹಳ್ಳಿಗೆ ಮರಳವಾಡಿ ಹಾಗೂ ಹಾರೋಹಳ್ಳಿ ಹೋಬಳಿಗಳನ್ನು ಸೇರಿಸಿ ತಾಲೂಕಾಗಿ ಘೋಷಿಸಿದ್ದರು. ಹಾರೋಹಳ್ಳಿಯಲ್ಲಿ ಒಟ್ಟು 39 ಕಂದಾಯ ಗ್ರಾಮಗಳಿದ್ದು, 63 ದಾಖಲೆ ಗ್ರಾಮಗಳಿವೆ. ಇತ್ತ ಮರಳವಾಡಿ ಹೋಬಳಿಯಲ್ಲಿ ಒಟ್ಟು 46 ಕಂದಾಯ ಗ್ರಾಮಗಳು, 118 ದಾಖಲೆ ಗ್ರಾಮಗಳಿದ್ದು, ಎರಡು ಹೋಬಳಿಗಳಿಂದ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ.

ಈಗಾಗಲೇ ತಾಲೂಕಿಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ರವಾನಿಸಲಾಗಿದೆ. ಆದರೂ ಕೂಡಾ ತಾಲೂಕಿಗೆ ಬೇಕಾದ ಸವಲತ್ತು ಕಲ್ಪಿಸಲು ಸರ್ಕಾರದಿಂದ ಅಧಿಕೃತ ಅಧಿಸೂಚನೆ ಮಾತ್ರ ಸಿಕ್ಕಿಲ್ಲ. ಕುಮಾರಸ್ವಾಮಿಯವರು ಕಾಟಾಚಾರಕ್ಕೆ ತಾಲೂಕು ಎಂದು ಘೋಷಣೆ ಮಾಡಿದ್ದಾರೆ. ಪತಿ, ಪತ್ನಿ ಇಬ್ಬರಿಂದ ನಯಾಪೈಸೆಯ ಕೆಲಸವಾಗದಿದ್ದರು ರಾಮನಗರ ಜನತೆ ಜೊತೆಗೆ ನಾವಿದ್ದೇವೆ ಎನ್ನಲು ತಾಲೂಕು ಘೋಷಣೆ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ವ್ಯಾಪ್ತಿಗೆ ಸೇರುವ ಪರಿಮಿತಿಯನ್ನ ಈಗಾಗಲೇ ಜಿಲ್ಲಾಡಳಿತ ಗುರುತಿಸಿದ್ದು, ಸರ್ಕಾರದಿಂದ ಅಧಿಸೂಚನೆ ಬಂದ ಬಳಿಕ ಕಚೇರಿಗಳ ಸ್ಥಳಾಂತರ ಹಾಗೂ ತಾಲೂಕು ಕಚೇರಿ ನಿರ್ಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

Leave a Reply

Your email address will not be published. Required fields are marked *