Connect with us

Crime

ಗುಂಡಿಕ್ಕಿ ಟಿಕ್‍ಟಾಕ್ ಸ್ಟಾರ್‌ನ ಬರ್ಬರ ಹತ್ಯೆ

Published

on

ನವದೆಹಲಿ: ಜಿಮ್ ಟ್ರೈನರ್ ಆಗಿರುವ ಟಿಕ್‍ಟಾಕ್ ಸ್ಟಾರ್‌ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಗಳವಾರ ರಾಷ್ಟ್ರರಾಜಧಾನಿ ನವದೆಹಲಿಯ ನಾಜಫ್‍ಗರ್ ನಲ್ಲಿ ನಡೆದಿದೆ.

ಮೋಹಿತ್ ಮೋರ್(27) ಮೃತ ಜಿಮ್ ಟ್ರೈನರ್. ಮೋಹಿತ್ ನಾಜಫ್‍ಗರ್ ನ ಧರಂಪುರನ ನಿವಾಸಿಯಾಗಿದ್ದು, ಮನೆಯ ಹತ್ತಿರ ಇರುವ ಫೋಟೋಕಾಪಿ ಶಾಪ್‍ನಲ್ಲಿ ತನ್ನ ಗೆಳೆಯನನ್ನು ಭೇಟಿ ಮಾಡಲು ಹೋಗಿದ್ದನು. ಈ ವೇಳೆ ದುಷ್ಕರ್ಮಿಗಳು ಮೋಹಿತ್‍ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

ಮೋಹಿತ್ ಫೋಟೋಶಾಪ್ ಒಳಗೆ ಕುಳಿತುಕೊಂಡು ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದನು. ಈ ವೇಳೆ ಮೂವರು ದುಷ್ಕರ್ಮಿಗಳು ಅಂಗಡಿಯೊಳಗೆ ಬಂದು ಬರೋಬ್ಬರಿ 13 ಗುಂಡು ಹೊಡೆದು ಮೋಹಿತ್‍ನನ್ನು ಕೊಲೆ ಮಾಡಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಮೋಹಿತ್ ಶಾಪ್‍ನಲ್ಲಿದ್ದ ಸೋಫಾ ಮೇಲೆ ಬಿದ್ದನು. ಈ ವೇಳೆ ಅಲ್ಲಿದ್ದ ಜನರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಷ್ಟರಲ್ಲಿ ಮೋಹಿತ್ ಮೃತಪಟ್ಟಿದ್ದನು ಎಂದು ವೈದ್ಯರು ತಿಳಿಸಿದ್ದಾರೆ.

ಕೊಲೆ ಮಾಡಿದ ನಂತರ ಆರೋಪಿಗಳು ತಪ್ಪಿಸಿಕೊಂಡು ಹೋದ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೂವರು ಆರೋಪಿಗಳಲ್ಲಿ ಒಬ್ಬ ಬ್ಲ್ಯಾಕ್ ಹೆಲ್ಮೆಟ್ ಧರಿಸಿ ಸ್ಕೂಟಿಯಲ್ಲಿ ಬಂದಿದ್ದನು. ಕೊಲೆ ಮಾಡಿದ ನಂತರ ಮೂವರು ಆರೋಪಿಗಳು ಜನಸಂದನಿ ಇರುವ ರಸ್ತೆಯಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೋಹಿತ್ ಮೋರ್ ಗೆ ಟಿಕ್‍ಟಾಕ್‍ನಲ್ಲಿ 5 ಲಕ್ಷ ಸಬ್‍ಸ್ಕ್ರೈಬರ್ ಇದ್ದು, ಇನ್‍ಸ್ಟಾಗ್ರಾಂನಲ್ಲಿ 3 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಮೋಹಿತ್ ತನ್ನ ಇನ್‍ಸ್ಟಾಗ್ರಾಂನಲ್ಲಿ ತನ್ನ ಫಿಟ್ನೆಸ್ ವಿಡಿಯೋ ಅಪ್ಲೋಡ್ ಮಾಡುತ್ತಿದ್ದನು.

ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ. ಹಣದ ವಿಷಯ ಅಥವಾ ಹಳೆ ದ್ವೇಷದಿಂದ ಈ ಕೊಲೆ ನಡೆದಿರಬಹುದು. ಮೋಹಿತ್ ಸಾಮಾಜಿಕ ಜಾಲತಾಣದಲ್ಲಿ ಯಾರೊಂದಿಗಾದರೂ ದ್ವೇಷ ಮಾಡಿಕೊಂಡಿದ್ದನಾ ಎಂದು ಆತನ ಟಿಕ್‍ಟಾಕ್, ಇನ್‍ಸ್ಟಾಗ್ರಾಂ ಹಾಗೂ ಕಾಲ್ ರೆಕಾರ್ಡ್ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.