Recent News

ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮತ್ತೊಂದು ಬಲಿ – ವಿದ್ಯಾರ್ಥಿನಿ ಸಾವು

ಕೋಲಾರ: ಇತ್ತೀಚೆಗಷ್ಟೇ ಯುವಕನೊಬ್ಬ ಸ್ಟಂಟ್ ಮಾಡಲು ಹೋಗಿ ಕುತ್ತಿಗೆ ಮೂಳೆ ಮುರಿದುಕೊಂಡು ಮೃತಪಟ್ಟಿದ್ದನು. ಇದೀಗ ವಿದ್ಯಾರ್ಥಿನಿಯೊಬ್ಬಳು ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ಮೃತಪಟ್ಟಿರುವ ಘಟನೆ ಕೋಲಾರ ತಾಲೂಕಿನ ವಡಗೇರಿ ಗ್ರಾಮದಲ್ಲಿ ನಡೆದಿದೆ.

ಮಾಲಾ ಮೃತ ವಿದ್ಯಾರ್ಥಿನಿ. ಮಾಲಾ ಬಿ.ಎ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೋಲಾರ ಮಹಿಳಾ ಕಾಲೇಜಿನಲ್ಲಿ ಓದುತ್ತಿದ್ದಳು. ಆದರೆ ಶುಕ್ರವಾರ ಸಂಜೆ ಮಾಲಾ, ಕೃಷಿ ಹೊಂಡದ ಬಳಿ ಟಿಕ್‍ಟಾಕ್ ವಿಡಿಯೋ ಮಾಡುವಾಗ ಸಾವನ್ನಪ್ಪಿದ್ದಾಳೆ.

ಮಾಲಾ ಶುಕ್ರವಾರ ಸಂಜೆ ಹೊಲದ ಬಳಿ ಹೋಗಿ ಅಲ್ಲಿದ್ದ ಕೃಷಿಹೊಂಡದ ಬಳಿ ತನ್ನ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಒಬ್ಬಳೇ ಟಿಕ್‍ಟಾಕ್ ಮಾಡುತ್ತಿದ್ದಳು. ಈ ವೇಳೆ ಮಾಲಾ ಮೊಬೈಲ್ ಸಮೇತ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಆಕೆಯನ್ನು ಕಾಪಾಡಲು ಸಾಧ್ಯವಾಗಿಲ್ಲ.

ಕೊನೆಗೆ ಹೊಲಕ್ಕೆ ಹೋಗಿ ತುಂಬಾ ಸಮಯವಾಗಿದೆ. ಇನ್ನೂ ಯಾಕೆ ಮಾಲಾ ಮನೆಗೆ ಬಂದಿಲ್ಲ ಎಂದು ಪೋಷಕರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈಗಾಗಲೇ ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮೊದಲ ಬಲಿಯಾಗಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ಕುಮಾರ್ ಮೃತ ಯುವಕ. ಕುಮಾರ್ ಟಿಕ್‍ಟಾಕ್ ವಿಡಿಯೋ ಮಾಡುವಾಗ ಆಯ ತಪ್ಪಿ ತಲೆ ನೆಲಕ್ಕೆ ಬಿದ್ದಿದ್ದನು. ಪರಿಣಾಮ ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕುಮಾರ್ ಸಾವನ್ನಪ್ಪಿದ್ದನು. ಆದರೆ ಈ ಬಗ್ಗೆ ಕುಮಾರ್ ಮಾವ ಮಂಜುನಾಥ್ ಅವರು, ಕುಮಾರ್ ಟಿಕ್‍ಟಾಕ್ ಮಾಡಲು ಹೋಗಿ ಸಾವನ್ನಪ್ಪಿಲ್ಲ. ಕುಮಾರ್ ತುಮಕೂರಿನ ರಾಮು ಮೆಲೋಡೀಸ್ ಆರ್ಕೆಸ್ಟ್ರಾದಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದನು. ಬಿಡುವಿನ ವೇಳೆ ಸರ್ಕಾರಿ ಮತ್ತು ಬಡ ಶಾಲೆಗಳಲ್ಲಿ ನೃತ್ಯ ಹೇಳಿಕೊಡುತ್ತಿದ್ದ. ಹೊಸ ಹೊಸ ಸ್ಟಂಟ್‍ಗಳನ್ನು ಕಲಿತರೆ ಸಿನಿಮಾ ಹಾಗೂ ಕಾರ್ಯಕ್ರಮಗಳಿಗೆ ಅವಕಾಶ ಸಿಗುತ್ತವೆ ಎಂದು ತಿಳಿಸಿದ್ದನು ಎಂದು ಪ್ರತಿಕ್ರಿಯಿಸಿದ್ದರು.

Leave a Reply

Your email address will not be published. Required fields are marked *