Tuesday, 25th February 2020

ಪಾಕ್‍ನಿಂದ ಗುಂಡಿನ ದಾಳಿ- ಮಹಿಳೆ, ಮಗು ಸೇರಿದಂತೆ ಒಂದೇ ಕುಟುಂಬದ ಮೂವರ ಸಾವು

– ಹಲವರಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪೂಂಚ್ ಜಿಲ್ಲೆಯ ಸಲೋತ್ರಿ ಇಲಾಖೆಯಲ್ಲಿ ಪಾಕಿಸ್ತಾನ ನಡೆಸಿದ ಗುಂಡಿನ ಚಕಮಕಿಯಲ್ಲಿ ಮಹಿಳೆ ಮತ್ತು ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಪೂಂಚ್, ಮನಕೋಟ್, ಬಾಲಕೋಟ್ ಮತ್ತು ನೌಶೆರಾ ಬಳಿಯಲ್ಲಿ ಪಾಕಿಸ್ತಾನಿಗಳು ಗುಂಡಿನ ದಾಳಿ ನಡೆಸುತ್ತಿದ್ದು, ಭಾರತೀಯ ಸೈನಿಕರು ಪ್ರತ್ಯುತ್ತರ ನೀಡುತ್ತಿದ್ದಾರೆ. ಒಂದು ವಾರದಲ್ಲಿ ಪಾಕಿಸ್ತಾನದ ಸೈನಿಕರು 60ಕ್ಕೂ ಅಧಿಕ ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ.

ಪಾಕಿಸ್ತಾನ ಸೇನೆ ಪೂಂಚ್, ಮನಕೋಟ್, ಬಾಲಕೋಟ್ ಮತ್ತು ನೌಶೆರಾ ಭಾಗದಲ್ಲಿಯ ಜನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ನಮ್ಮ ಸೇನೆಯ ಸೈನಿಕರು ಸಹ ತಕ್ಕ ಪ್ರತ್ಯುತ್ತರವನ್ನು ನೀಡುತ್ತಿದ್ದಾರೆ. ಸಲೋತ್ರಿ ವಿಭಾಗದ ಜನರು ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ಸಲೋತ್ರಿಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಇದೇ ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾರೆಂದು ರಕ್ಷಣಾ ಇಲಾಖೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ಹೇಳಿದ್ದಾರೆ.

ಉಗ್ರರು ಮತ್ತು ಸೇನಾಪಡೆಗಳ ನಡುವೆ ಗಡಿ ನಿಯಂತ್ರಣ ರೇಖೆಯ ಕುಪ್ವಾರದ ಹಂದ್ವಾರದಲ್ಲಿ ಗುಂಡಿನ ಕಾಳಗ ನಡೆದಿದೆ. ಈ ಘಟನೆಯಲ್ಲಿ ಐವರು ಸೇನಾಧಿಕಾರಿಗಳು ಹುತಾತ್ಮರಾಗಿದ್ದು, ಓರ್ವ ನಾಗರಿಕ ಕೂಡ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯಲ್ಲಿ ಉಗ್ರಗಾಮಿಯೋರ್ವ ಸತ್ತಂತೆ ನಟಿಸಿದ್ದು, ಹತ್ತಿರ ಬರುತ್ತಿದ್ದ ಸೇನಾಪಡೆ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾನೆ. ಈ ವೇಳೆ ಸಿಆರ್ ಪಿಎಫ್ ಇನ್ಸ್ ಪೆಕ್ಟರ್ ಹಾಗೂ ನಾಲ್ವರು ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಇತ್ತ ಸತ್ತಂತೆ ನಟಿಸಿ ಯೋಧರನ್ನು ಕೊಂದ ಉಗ್ರ ಕೂಡ ಫಿನೀಶ್ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *