Saturday, 7th December 2019

Recent News

ನಾಲ್ಕೈದು ದಿನದಲ್ಲಿ ನೂರಕ್ಕೆ ನೂರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ: ಬಿಎಸ್‍ವೈ

ಬೆಂಗಳೂರು: ಕೇವಲ ನಾಲ್ಕೈದು ದಿನಗಳಲ್ಲಿ ನೂರಕ್ಕೆ ನೂರರಷ್ಟು ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ಬದಲಾಗಬೇಕು ಎನ್ನುವುದು ಆರೂವರೆ ಕೋಟಿ ಜನರ ಅಪೇಕ್ಷೆಯಾಗಿದೆ. ಅದು ಗುರುವಾರ ನೂರಕ್ಕೆ ನೂರಷ್ಟು ಪೂರೈಸುತ್ತದೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಮೂರು ದಿನದಲ್ಲಿ ಅತೃಪ್ತ ಶಾಸಕರು ಮತ್ತೆ ಮೈತ್ರಿ ಸರ್ಕಾರವನ್ನು ಸೇರಲು ಸಾಧ್ಯವೇ ಇಲ್ಲ. ಅದೂ ಸಹ ಒಬ್ಬಿಬ್ಬರಲ್ಲ ಸರ್ಕಾರ ಉಳಿಯಬೇಕಾದರೆ ಐದಾರು ಜನ ಶಾಸಕರು ಮರಳಬೇಕು. ಇದು ಸಾಧ್ಯವಿಲ್ಲ ಎಂಬುದನ್ನರಿತ ಯಡಿಯೂರಪ್ಪನವರು ಫುಲ್ ಖುಷಿಯಾಗಿದ್ದು, ಸರ್ಕಾರ ರಚಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಆಡಳಿತ ನೀಡುವಂತಹ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ. ಈ ಬಗ್ಗೆ ನಾಡಿನ ಜನತೆ ಹಾಗೂ ಕಾರ್ಯಕರ್ತರಿಗೆ ಭರವಸೆ ನೀಡುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.

ಸಿಎಂ ಯಶಸ್ವಿಯಾಗಲ್ಲ: ಯಾವುದೇ ಕಾರಣಕ್ಕೂ ವಿಶ್ವಾಸ ಮತದಲ್ಲಿ ಸಿಎಂ ಯಶಸ್ವಿಯಾಗುವುದಿಲ್ಲ. ಇದು ಅವರಿಗೂ ತಿಳಿದಿದೆ. ಗುರುವಾರ ಸಿಎಂ ಕೇವಲ ಭಾಷಣ ಮಾಡಿ ಹೋಗಬಹುದು ಎಂದು ಊಹಿಸಿದ್ದೇನೆ. ಕಾದು ನೋಡಣ. ಆದರೆ ನಾಲ್ಕೈದು ದಿನಗಳಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮೆಲ್ಲ ಶಾಸಕರು ಇಂದು ರಾತ್ರಿ ತಮ್ಮೊಂದಿಗೆ ಉಳಿಯುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಗೋವಿಂದ ಕಾರಜೋಳ, ಮಾಧು ಸ್ವಾಮಿ ಅವರೊಂದಿಗೆ ರೆಸಾರ್ಟಿಗೆ ಹೋಗುತ್ತಿದ್ದೇನೆ. ಆರೂವರೆ ಕೋಟಿ ಕನ್ನಡಿಗರು ಬಿಜೆಪಿಗೆ ಆಶಿರ್ವಾದ ಮಾಡಿದ್ದಾರೆ. ಹೀಗಾಗಿ ಈ ಸರ್ಕಾರ ಬದಲಾಗಬೇಕಿದೆ. ಅವರ ಆಸೆಯಂತೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *