Tuesday, 16th July 2019

Recent News

ಕಾಡಾನೆಗಳ ಹಿಂಡು ಪ್ರತ್ಯಕ್ಷ – ಅಪಾರ ಪ್ರಮಾಣದ ಬೆಳೆ ನಾಶ

ಹಾಸನ: ಸಕಲೇಶಪುರ ತಾಲೂಕಿನ ನಿಡನೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡೊಂದು ಪ್ರತ್ಯಕ್ಷವಾಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಘಟನೆ ನಡೆದಿದೆ.

ಆಲೂರು ಸಕಲೇಶಪುರ ತಾಲೂಕಿನ ಗಡಿಭಾಗವಾದ ನಿಡನೂರು ಸಮೀಪ ಬೆಳ್ಳಂಬೆಳಿಗ್ಗೆ ಈ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಮಲ್ಲಿಕ್ ಎಂಬವರ ಕಾಫಿ ತೋಟ ಹಾಗೂ ಗದ್ದೆಯಲ್ಲಿ ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.

ಮಲೆನಾಡು ಭಾಗದಲ್ಲಿ ಆನೆ ಮತ್ತು ಮಾನವನ ನಡುವಿನ ಸಂಘರ್ಷ ಮುಂದುವರಿದಿದ್ದು, ರೈತರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಹಲವಾರು ಪ್ರತಿಭಟನೆಗಳು ಮಾಡಿದ್ದರೂ ಸಹ ಪ್ರಯೋಜನವಾಗಿಲ್ಲ.

ಮೂರು ತಿಂಗಳ ಹಿಂದೆ ಹೊಸಗದ್ದೆ ಸಮೀಪ ತಾಯಮ್ಮ ಎಂಬ ಮಹಿಳೆ ಆನೆ ದಾಳಿಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರತಿಭಟನೆಗೆ ಮಣಿದ ಸರ್ಕಾರ ಎರಡು ಕಾಡಾನೆಗಳನ್ನು ಹಿಡಿಯಲು ಅನುಮತಿ ನೀಡಿತ್ತು. ಮಳೆಗಾಲವಾಗಿದ್ದರಿಂದ ಕಾಡಾನೆ ಹಿಡಿಯುವ ಕಾರ್ಯಾಚರಣೆಯನ್ನು ಮುಂದೂಡಲಾಗಿತ್ತು.

ದಸರಾ ಮುಗಿದ ನಂತರ ಸಾಕಾನೆಗಳಿಗೆ ವಿಶ್ರಾಂತಿ ನೀಡಲಾಗಿದ್ದು, ಸೋಮವಾರದಿಂದ ಕಾಡಾನೆ ಹಿಡಿಯುವ ಕಾರ್ಯಚರಣೆ ಆರಂಭಿಸಲು ಸಿದ್ಧತೆ ನಡೆದಿತ್ತು. ಆದರೆ ದುಬಾರೆಯಿಂದ ಸಾಕಾನೆಗಳು ಆಗಮಿಸುವುದು ತಡವಾಗಿದ್ದರಿಂದ ನಾಳೆಯಿಂದ ಕಾಡಾನೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *