Wednesday, 15th August 2018

Recent News

ಮೂರು ದಶಕಗಳ ಬಳಿಕ ಬಿಜೆಪಿ ಭದ್ರಕೋಟೆ ಕಾಂಗ್ರೆಸ್ ವಶಕ್ಕೆ

ಕಲಬುರಗಿ: 30 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಈಶಾನ್ಯ ಪದವೀಧರ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಂಡಿದೆ.

1988ರಲ್ಲಿ ಕ್ಷೇತ್ರ ಸ್ಥಾಪನೆಯಾದಾಗಿನಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಹುಮನಾಬಾದ್ 321 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಈ ಮೂಲಕ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಗೆ ಈ ಕ್ಷೇತ್ರದಲ್ಲಿ ಗೆಲುವು ಸಿಕ್ಕಂತಾಗಿದೆ.

ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆ ಹಾಗೂ ಹರಪನಹಳ್ಳಿ ತಾಲೂಕು ಒಳಗೊಂಡ ಈಶಾನ್ಯ ಪದವೀಧರ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶೇಕಡ 67.50ರಷ್ಟು ಮತದಾನವಾಗಿತ್ತು. ಕಳೆದ ಶುಕ್ರವಾರ ನಡೆದ ಮತದಾನದಲ್ಲಿ 82,054 ಮತದಾರರ ಪೈಕಿ 55,384 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ನಿನ್ನೆ ಗುಲ್ಬರ್ಗಾ ವಿವಿ ಗಣಿತ ವಿಭಾಗದ ಭಾಸ್ಕರ್ ಹಾಲ್ ನಲ್ಲಿ ಬೆಳಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ನಡೆದಿತ್ತು. ಇಂದು ಬೆಳಗ್ಗೆ 4 ಗಂಟೆಯವರೆಗೂ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮೊದಲ ಪ್ರಾಶಸ್ತ್ಯ ಹಾಗೂ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಲಾಯಿತು. ಆದರೆ ಯಾವೊಬ್ಬ ಅಭ್ಯರ್ಥಿಯು ಅರ್ಧಕ್ಕಿಂತ ಹೆಚ್ಚು ಮತಗಳನ್ನು ಪಡೆಯದ ಹಿನ್ನೆಲೆ ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ನಡೆಸಲಾಯಿತು.

ಈ ಚುನಾವಣೆಯಲ್ಲಿ ಚಂದ್ರಶೇಖರ್ ಪಾಟೀಲ್ ಹುಮನಾಬಾದ್ 321 ಮತಗಳ ಅಂತರದಿಂದ ವಿಜಯ ಸಾಧಿಸಿದರು. ಚಂದ್ರಶೇಖರ ಪಾಟೀಲ್ ಹುಮನಾಬಾದ್ 18,768 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಕೆ.ಬಿ.ಶ್ರೀನಿವಾಸ್ 18,447 ಮತಗಳನ್ನು ಪಡೆದುಕೊಂಡರು.

ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಕಲಬುರಗಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ವಿಜೇತ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಹುಮನಾಬಾದ್ ಗೆ ಚುನಾವಣಾಧಿಕಾರಿ ಪಂಕಜಕುಮಾರ್ ಪಾಂಡೆ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ್ ಪಾಟೀಲ್ ಹುಮನಾಬಾದ್ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಚುನಾವಣೆ ಸಂದರ್ಭದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

Leave a Reply

Your email address will not be published. Required fields are marked *