Connect with us

Latest

ಬಾವಿಯಲ್ಲಿ ಈಜಿದಕ್ಕೆ ದಲಿತ ಬಾಲಕರನ್ನು ವಿವಸ್ತ್ರಗೊಳಿಸಿ ಹಲ್ಲೆ!

Published

on

ಮುಂಬೈ: ಮೇಲ್ವರ್ಗದವರ ಬಾವಿಯಲ್ಲಿ ಈಜಿದಕ್ಕೆ ದಲಿತ ಬಾಲಕರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದ ಜಲಾಂಗನ್ ಜಿಲ್ಲೆಯ ಜಾಮನಾರ್ ತಾಲ್ಲೂಕಿನ ವಾಕಡಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಜೂನ್ 10ರಂದು ಮೂವರು ದಲಿತ ಬಾಲಕರು ಬಾವಿಯಲ್ಲಿ ಈಜಿದಕ್ಕೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಏನಿದು ಘಟನೆ?
ಜೂನ್ 10ರ ಭಾನುವಾರದಂದು ವಾಕಡಿ ಗ್ರಾಮದಲ್ಲಿ ಮೂವರು ದಲಿತ ಬಾಲಕರು ಮೇಲ್ವರ್ಗಕ್ಕೆ ಸೇರಿದ ಬಾವಿಯೊಂದರಲ್ಲಿ ಈಜಾಡುತ್ತಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೇಲ್ವರ್ಗದ ಗುಂಪೊಂದು ಬಾಲಕರನ್ನು ಮೇಲಕ್ಕೆ ಬರುವಂತೆ ಹೇಳಿ
ವಿವಸ್ತ್ರಗೊಳಿಸಿ ಗ್ರಾಮದ ತುಂಬಾ ಮೆರವಣಿಗೆ ನಡೆಸಿದ್ದಾರೆ.

ಈ ವೇಳೆ ಬಾಲಕರಿಗೆ ಕಟ್ಟಿಗೆ ಮತ್ತು ಬೆಲ್ಟ್ ನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮಿಡಿಯಾಗಳಲ್ಲಿ ಹಾಕಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.

ರಾಜ್ಯ ಕಾನೂನು ಸಚಿವ ದೀಲಿಪ್ ಕಾಂಬ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಬಾಲಕರ ಮೇಲಿನ ಹಲ್ಲೆ ಕುರಿತು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಮಾಜ ಕಲ್ಯಾಣ ಸಚಿವ ರಾಮದಾಸ್ ಅಠವಾಳೆ, ದಲಿತ ಬಾಲಕ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯದ ಅಡಿ ದೂರು ದಾಖಲಿಸುವಂತೆ ಆಗ್ರಹಿಸಿದ್ದಾರೆ.

ಬಾಲಕರ ಮೇಲಿನ ಹಲ್ಲೆ ಕುರಿತು ರಾಜ್ಯಾದ್ಯಂತ ಪಕ್ಷಾತೀತವಾಗಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಮಾಜಿ ಸಚಿವರಾದ ಏಕನಾಥ್ ಖಾಡ್ನೆ ಆರೋಪಿಗಳ ವಿರುದ್ಧ ಎಸ್‍ಸಿ/ಎಸ್‍ಟಿ ಅಡಿಯಲ್ಲಿ ದೂರು ದಾಖಲಿಸುವಂತೆ ಆಗ್ರಹಿಸಿದ್ದಾರೆ.

ರಾಹುಲ್ ಖಂಡನೆ: ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ದಲಿತರ ಮೇಲಿನ ಹಲ್ಲೆ ಕುರಿತು ಆಕ್ರೋಶವ್ಯಕ್ತಪಡಿಸಿದ್ದಾರೆ. ಇಂದು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ “ಬಿಜೆಪಿ ಮತ್ತು ಆರ್‍ಎಸ್‍ಎಸ್ ಅಧಿಕಾರದಲ್ಲಿ ದಿನೇ ದಿನೇ ದಲಿತರ ಮೇಲಿನ ಹಲ್ಲೆಗಳು ಹೆಚ್ಚುತ್ತಿವೆ. ಆ ಬಾಲಕರು ಏನು ತಪ್ಪು ಮಾಡಿದ್ದರು? ಅವರು ಮಾಡಿದ ಏಕೈಕ ತಪ್ಪು ಮೇಲ್ವರ್ಗದವರ ಬಾವಿಯಲ್ಲಿ ಈಜಿದ್ದು, ಕೇವಲ ಬಾವಿಯಲ್ಲಿ ಈಜಿದ್ದಕ್ಕೆ ಇಷ್ಟು ಅಮಾನವೀಯವಾಗಿ ಬಾಲಕರಿಗೆ ಶಿಕ್ಷೆ ನೀಡಿದ್ದಾರೆ ಎಂದು ಬರೆದು ಕೊಂಡಿದ್ದಾರೆ.

https://twitter.com/RahulGandhi/status/1007519009158332416