Saturday, 17th August 2019

ಇದು Exit Poll ಅಷ್ಟೇ, Exact Poll ಪೋಲ್ ಅಲ್ಲ – ಇವಿಎಂ ವಿರುದ್ಧ ಸಿಎಂ ಕಿಡಿ

ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಗಳು ಕೇವಲ ಒಂದು ಪಕ್ಷ ಹಾಗೂ ವ್ಯಕ್ತಿ ಪರ ಸುಳ್ಳು ವರದಿ ತೋರಿಸುತ್ತಿದೆ. ಇದು ಎಕ್ಸಿಟ್ ಪೋಲ್ ಅಷ್ಟೇ ಹೊರತು ಎಕ್ಸಾಟ್ ಪೋಲ್ ಅಲ್ಲ ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಮಾಧ್ಯಮಗಳ ಸಮೀಕ್ಷೆಯ ಬಗ್ಗೆ ಕಿಡಿಕಾರಿದ್ದಾರೆ.

ಸದ್ಯ ಎಲ್ಲಾ ಮಾಧ್ಯಮಗಳ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಬಿಜೆಪಿ ಪಕ್ಷ ಲೋಕಸಮರದಲ್ಲಿ ಜಯಗಳಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ. ಆದರೆ ಈ ಸಮೀಕ್ಷೆಯನ್ನು ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪ್ರತಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಏನೂ ಕೆಲಸವನ್ನು ಮಾಡದೇ ಬರೀ ಭಾಷಣದಲ್ಲಿಯೇ ಅಭಿವೃದ್ಧಿ ತೋರಿಸಿದ ಬಿಜೆಪಿಗೆ ಯಾಕೆ ಹೆಚ್ಚು ಅಂಕಿ ಅಂಶ ತೋರಿಸುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೀಗೆ ಕುಮಾರಸ್ವಾಮಿ ಕೂಡ ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ಒಪ್ಪದೆ ಸರಣಿ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಟ್ವೀಟ್‍ಗಳಲ್ಲಿ ಏನಿದೆ?
ಎಲ್ಲಾ ವಿರೋಧ ಪಕ್ಷಗಳು ಕೂಡ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಇವಿಎಂ ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿರೋಧ ಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳೇ ಬ್ಯಾಲೆಟ್ ಪೇಪರ್ ಗಳನ್ನು ಆಯ್ಕೆ ಮಾಡುತ್ತಿದ್ದಾರೆ. 2019 ಎಕ್ಸಿಟ್ ಪೋಲ್ ಸಂಪೂರ್ಣವಾಗಿ ಆಡಳಿತ ಪಕ್ಷದ ಪರವಾಗಿ ಇದೆ. ಇವಿಎಂಗಳನ್ನು ಇಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಎಕ್ಸಿಟ್ ಪೋಲ್ ದೇಶದಲ್ಲಿ ಮೋದಿ ಅಲೆ ಇದೆ ಎಂದು ತೋರಿಸಲು ಅಷ್ಟೆ. ತಾತ್ಕಾಲಿಕ, ಕಾಲ್ಪನಿಕ ಮೋದಿ ಅಲೆ ಹೆಚ್ಚು ದಿನ ಇರಲ್ಲ. ಬಹುಮತದ ಕೊರತೆಯಾದರೆ ಪ್ರಾದೇಶಿಕ ಪಕ್ಷ ಸೆಳೆಯಲು ಯತ್ನ ಮಾಡಲಾಗುತ್ತೆ. ಎಕ್ಸಿಟ್ ಪೋಲ್ ಮೂಲಕ ಪ್ರಾದೇಶಿಕ ಪಕ್ಷಗಳನ್ನು ಸೆಳೆಯುವ ಯತ್ನ ಮಾಡಲಾಗುತ್ತಿದೆ. ಬಿಜೆಪಿ ಎಕ್ಸಿಟ್ ಪೋಲ್ ಮೂಲಕ ವೇದಿಕೆ ಸಿದ್ಧಪಡಿಸುತ್ತಿದೆ. ಇದು ಎಕ್ಸಿಟ್ ಪೋಲ್ ಅಷ್ಟೇ. ಎಕ್ಸಾಟ್ ಪೋಲ್ ಅಲ್ಲ ಎಂದು ಬರೆದು ಎಚ್.ಡಿ ದೇವೇಗೌಡ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ರಾಹುಲ್ ಗಾಂಧಿ, ಬಿಎಸ್‍ಪಿ ಹಾಗೂ ಎಕ್ಸಿಟ್ ಪೋಲ್ 2019 ಹ್ಯಾಷ್‍ಟ್ಯಾಗ್ ಹಾಕಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *