Monday, 24th February 2020

ಕಾರಿಗೆ ಸಗಣಿ ಲೇಪನ – ಮಾಲಕಿಯ ಉಪಾಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ

ಅಹಮದಾಬಾದ್: ಇತ್ತಿಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಗಣಿ ಹಚ್ಚಿದ ಕಾರೊಂದು ಭಾರಿ ಸುದ್ದಿಯಾಗಿತ್ತು. ಈಗ ಆ ಕಾರಿನ ಮಾಲಕಿ ಸಿಕ್ಕಿದ್ದು, ಯಾಕೆ ಸಗಣಿ ಹಚ್ಚಿದ್ದೇನೆ ಎನ್ನುವ ವಿಚಾರವನ್ನು ಬಹಿರಂಗ ಮಾಡಿದ್ದಾರೆ.

ಅಹಮದಾಬಾದ್‍ನ ಸೀಜಾಲ್ ಷಾ ತನ್ನ ಟೊಯೋಟಾ ಆಲ್ಟಿಸ್ ಕಾರಿನ ಎಲ್ಲಾ ಹೊರ ಭಾಗಗಳಿಗೂ ಸಗಣಿಯ ಲೇಪನ ಮಾಡಿದ್ದರು. ಇದನ್ನು ರೂಪೇಶ್ ಗೌರಂಗಾ ದಾಸ್ ಎಂಬುವವರು ಫೋಟೋ ತೆಗೆದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಜನರು ಬಿರು ಬಿಸಲಿನಿಂದ ಪಾರಾಗಲು ನಾನಾ ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಇದಕ್ಕೆ ಸೀಜಾಲ್ ಷಾ ತಮ್ಮ ಕಾರನ್ನು ತಂಪಾಗಿ ಇಡಲು ಹಸುವಿನ ಸಗಣಿಯನ್ನು ಕಾರಿನ ಹೊರಭಾಗಕ್ಕೆ ಲೇಪನ ಮಾಡಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಸೀಜಾಲ್ ಷಾ, “ಈ ರೀತಿ ಸಗಣಿ ಲೇಪನ ಮಾಡುವುದರಿಂದ ನನ್ನ ಕಾರು ತಂಪಾಗಿ ಇರುತ್ತದೆ. ಜೊತೆಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಹಾಯವಾಗುತ್ತದೆ. ಕಾರಿನಲ್ಲಿ ಎಸಿ ಬಳಸುವುದರಿಂದ ಹಾನಿಕಾರಕ ಅನಿಲಗಳು ಬಿಡುಗಡೆಯಾಗಿ ಪರಿಸರ ಮಾಲಿನ್ಯವಾಗುತ್ತದೆ. ಅದಕ್ಕೆ ನಾನು ಕಾರನ್ನು ಚಲಿಸುವಾಗ ಎಸಿಯನ್ನು ಹಾಕಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.

ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನು ನನ್ನ ಮನೆಯ ಗೋಡೆಗಳಿಗೆ ಮತ್ತು ನೆಲಗಳಿಗೆ ಸಗಣಿ ಹಾಕಿಸುತ್ತೇನೆ. ಮನೆಯಲ್ಲಿ ತಂಪಾದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಾರಿಗೂ ಲೇಪನ ಮಾಡಿದರೆ ಹೇಗೆ ಎಂದು ಆಲೋಚಿಸಿದೆ. ಈ ಕಾರಣಕ್ಕೆ ನಾನು ಕಾರಿಗೂ ಸಗಣಿ ಮಾಡಿದೆ ಎಂದು ತಿಳಿಸಿದ್ದಾರೆ.

ಸಗಣಿ ಹಚ್ಚಿದ ಕಾರಿನ ಫೋಟೋ ವೈರಲ್ ಆಗಿದ್ದು ನೆಟ್ಟಿಗರು ಮಾಲಕಿಯ ಐಡಿಯಾಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *