Connect with us

International

30 ವರ್ಷಗಳ ಬಳಿಕ ‘ಅಮ್ಮ’ ಎಂದ ಮಗ – ಕೇಳಲು ತಾಯಿಯೇ ಇಲ್ಲ

Published

on

– ತಾಯಿ ಸಾವನ್ನಪ್ಪಿದ 11 ತಿಂಗಳ ನಂತ್ರ ಮಗ ಸಾವು
– ಪ್ರತಿದಿನ ಮಗನ ಕಾಲಿಗೆ ನಮಸ್ಕರಿಸಿ ಕೆಲಸ ಆರಂಭಿಸ್ತಿದ್ದ ತಾಯಿ

ತಿರುವನಂತಪುರಂ: ತಾಯಿ ನಿಧನವಾದ 11 ತಿಂಗಳ ನಂತರ ಬುದ್ಧಿಮಾಂದ್ಯ ಮಗ ಕೂಡ ಕೊನೆಯುಸಿರೆಳೆದಿರುವ ಘಟನೆ ತಿರುವನಂತಪುರಂನ ಒಟ್ಟಪಾಲಂನಲ್ಲಿ ನಡೆದಿದೆ.

ಮೃತನನ್ನು ಶರತ್ ಚಂದ್ರನ್ (30) ಎಂದು ಗುರುತಿಸಲಾಗಿದೆ. ಇವರು ಮೂಲತಃ ಒಟ್ಟಪಾಲಂನವರಾಗಿದ್ದಾರೆ. ಶರತ್ ಚಂದ್ರನ್ ಬುದ್ಧಿಮಾಂದ್ಯನಾಗಿದ್ದನು. ಈತನನ್ನು ತಾಯಿ ಶೈಲಜಾ ಅವರೇ ನೋಡಿಕೊಳ್ಳುತ್ತಿದ್ದರು.

ಶರತ್ ಚಂದ್ರನ್, ರಾಮಚಂದ್ರ ಕುರುಪ್ ಮತ್ತು ದಿವಂಗತ ಶೈಲಜಾ ಅವರ ಹಿರಿಯ ಮಗನಾಗಿದ್ದರು. ದಂಪತಿ ತಮ್ಮ ವಿಕಲಚೇತನ ಮಗನನ್ನು 30 ವರ್ಷ ವಯಸ್ಸಿನವರೆಗೂ ತುಂಬಾ ಕಾಳಜಿಯಿಂದ ನೋಡಿಕೊಂಡರು. ಸಾಧ್ಯವಿರುವ ಎಲ್ಲಾ ಚಿಕಿತ್ಸೆಯನ್ನು ನೀಡಿದ್ದರು. ಆದರೆ ಶರತ್‍ಗೆ ಮಾತ್ರ ನಡೆಯಲು, ಮಾತನಾಡಲು ಹಾಗೂ ಕೈಕಾಲುಗಳನ್ನು ಸರಿಸಲು ಸಾಧ್ಯವಾಗಲಿಲ್ಲ. ಪ್ರತಿ ದಿನ ಮಗನ ಕಾಲು ಮುಟ್ಟಿ ನಮಸ್ಕರಿಸಿಯೇ ಶೈಲಜಾ ತನ್ನ ದಿನಚರಿ ಆರಂಭಿಸುತ್ತಿದ್ದರು.

ಇತ್ತ ಶರತ್ ತಾಯಿ ಶೈಲಜಾ ಅವರು ಕೂಡ ಅನಾರೋಗ್ಯದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು. ಶರತ್‍ಗೆ ಹುಟ್ಟಿದಾಗಿನಿಂದ ಅಮ್ಮ ಎಂದು ಉಚ್ಛಾರ ಮಾಡಲು ಬರುತ್ತಿರಲಿಲ್ಲ. 30 ವರ್ಷಗಳ ಕಾಲ ತನ್ನ ವಿಕಲಚೇತನ ಮಗನಿಂದ ಅಮ್ಮ ಎಂದು ಕರೆಯುವುದನ್ನು ಕಾದಿದ್ದರು. ಆದರೆ ಶರತ್ ಮೊದಲು ತನ್ನ ತಾಯಿಯನ್ನು ಕರೆದಾಗ ಶೈಲಜಾ ಅವರು ಆಸ್ಪತ್ರೆಯಲ್ಲಿ ಜೀವನ್ಮರಣದ ಜೊತೆ ಹೋರಾಡುತ್ತಿದ್ದರು. ಶರತ್ ಚಂದ್ರನ್ ಅಮ್ಮ ಎಂಬ ಪದವನ್ನು ಉಚ್ಛರಿಸಿದಾಗ, ಅವರ ತಾಯಿ ಶೈಲಾಜಾ ಅದನ್ನು ಕೇಳಲು ಅವನ ಮುಂದೆ ಇರಲಿಲ್ಲ. ಆದರೆ ದುರಾದೃಷ್ಟವಶಾತ್ ಶೈಲಜಾ ಅದನ್ನು ಕೇಳಲು ಸಾಧ್ಯವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಶೈಲಜಾ ಕೊನೆಯುಸಿರೆಳದಿದ್ದರು.

11 ತಿಂಗಳಕಾಲ ತನ್ನ ಪ್ರೀತಿಯ ತಾಯಿಂದ ಬೇರ್ಪಟ್ಟಿದ್ದ ಶರತ್, ಎರ್ನಾಕುಲಂನ ಖಾಸಗಿ ಆಸ್ಪತ್ರೆಯಲ್ಲಿ ಉಸಿರಾಟ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಶರತ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳದಿದ್ದಾರೆ. ಶರತ್ ಅವರ ತಂದೆ ರಾಮಚಂದ್ರ ಕುರುಪ್ ಅಮೆರಿಕದ ಡಿಸ್ನಿ ಕ್ರೂಸ್ ಲೈನ್ಸ್ ಶಿಪ್ಪಿಂಗ್ ಕಾರ್ಪೊರೇಶನ್‍ನಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.

Click to comment

Leave a Reply

Your email address will not be published. Required fields are marked *