Tuesday, 21st January 2020

Recent News

ಮಾಸ್ತಿಗುಡಿ ದುರಂತ: ಐವರು ಆರೋಪಿಗಳ ಅರ್ಜಿ ವಜಾಗೊಳಿಸಿದ ಕೋರ್ಟ್

ರಾಮನಗರ: ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ದುರಂತ ಅಂತ್ಯ ಕಂಡಿದ್ದ ಖಳನಟರ ಸಾವಿನ ಪ್ರಕರಣದಿಂದ ಕೈಬಿಡುವಂತೆ ಕೋರಿ ಆರು ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಐವರು ಆರೋಪಿಗಳ ಅರ್ಜಿಯನ್ನು ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿದೆ.

ಈ ಪ್ರಕರಣದ ಕುರಿತು ರಾಮನಗರದ ಮೂರನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಶನಿವಾರ ನಡೆದ ವಿಚಾರಣೆ ನಡೆಯಿತು. ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಸಿದ್ಧಲಿಂಗಪ್ರಭು ಅವರು, ಐವರು ಆರೋಪಿಗಳ ಅರ್ಜಿಯನ್ನು ವಜಾಗೊಳಿಸಿದ್ದು, ಆರನೇ ಆರೋಪಿ ಹೆಲಿಕಾಪ್ಟರ್ ಪೈಲೆಟ್ ಪ್ರಕಾಶ್ ಬಿರದಾರ್ ಅವರನ್ನ ಪ್ರಕರಣದಿಂದ ಕೈಬಿಡುವಂತೆ ಆದೇಶ ನೀಡಿದ್ದಾರೆ.

ಆರೋಪಿ ಪ್ರಕಾಶ್ ಬಿರಾದರ್ ವಿರುದ್ಧ ಸ್ಯಾಕ್ಷ್ಯಾಧಾರ ಕೊರತೆ ಹಿನ್ನಲೆಯಲ್ಲಿ ಅವರನ್ನು ಪ್ರಕರಣದಿಂದ ಕೈಬಿಡಲಾಗಿದೆ. ಶೂಟಿಂಗ್ ವೇಳೆ ಪ್ರಕಾಶ್ ಬಿರಾದರ್ ಅವರು ಹೆಲಿಕಾಪ್ಟರ್ ಚಾಲನೆ ಮಾಡಿದ್ದರು. ಪ್ರಕಾಶ್ ಅವರ ಪರ ಹಿರಿಯ ವಕೀಲ ಐ.ಎಸ್. ದಿಲೀಪ್‍ಕುಮಾರ್ ಅವರು ಪ್ರಬಲವಾಗಿ ವಾದ ಮಂಡಿಸಿದರು.

ಮಾಸ್ತಿಗುಡಿ ದುರಂತ ಪ್ರಕರಣದ ಪ್ರಮುಖ ಆರೋಪಿಗಳಾದ ನಿರ್ಮಾಪಕ ಸುಂದರ್ ಪಿ.ಗೌಡ(ಎ1), ನಿರ್ದೇಶಕ ರಾಜಶೇಖರ್(ಎ2), ಸಿದ್ದಾರ್ಥ್ ಅಲಿಯಾಸ್ ಸಿದ್ದು(ಎ3), ಸಾಹಸ ನಿರ್ದೇಶಕ ರವಿವರ್ಮಾ(ಎ4) ಮತ್ತು ಎ.ಪಿ.ಭರತ್ ರಾವ್(ಎ5) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಹೀಗಾಗಿ ಈ ಐವರು ಆರೋಪಿಗಳಿಗೆ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಈ ಮೂಲಕ ನ್ಯಾಯಾಧೀಶರಾದ ಸಿದ್ಧಲಿಂಗಪ್ರಭು ಅವರು ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದ್ದಾರೆ.

ಏನಿದು ಪ್ರಕರಣ?:
ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ 2016ರ ನವೆಂಬರ್ 7ರಂದು ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ನಡೆದಿತ್ತು. ಈ ವೇಳೆ ಹೆಲಿಕಾಪ್ಟರ್ ನಿಂದ 100 ಅಡಿ ಎತ್ತರದಿಂದ ಖಳನಟ ಅನಿಲ್, ಉದಯ್ ಹಾಗೂ ನಾಯಕ ನಟ ದುನಿಯಾ ವಿಜಯ್ ಜಲಾಶಯಕ್ಕೆ ಜಿಗಿದಿದ್ದರು. ಆದರೆ ಮೂವರಿಗೂ ಈಜು ಬರುತ್ತಿರಲಿಲ್ಲ, ಜೊತೆಗೆ ಯಾವುದೇ ಸುರಕ್ಷಾ ಸಾಧನಗಳಿಲ್ಲದೆ ಹೆಲಿಕಾಪ್ಟರ್ ಮೂಲಕ ಜಿಗಿದಿದ್ದರು. ತಕ್ಷಣವೇ ನಟ ದುನಿಯಾ ವಿಜಯ್ ಅವರನ್ನು ತೆಪ್ಪದ ಮೂಲಕ ರಕ್ಷಣೆ ಮಾಡಲಾಗಿತ್ತು. ಆದರೆ ಅನಿಲ್ ಹಾಗೂ ಉದಯ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಅವರಿಬ್ಬರ ಮೃತದೇಹಗಳು 48 ಗಂಟೆಯ ಬಳಿಕ ಪತ್ತೆಯಾಗಿದ್ದವು. ಈ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *