Connect with us

Bagalkot

ಆರ್ಥಿಕ ಹಿಂಜರಿತ ದೇಶದಲ್ಲಿ ಅಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ ಇದೆ: ಶೆಟ್ಟರ್

Published

on

– ಕೇಂದ್ರದಿಂದ ಇವತ್ತಲ್ಲ ನಾಳೆ ಪರಿಹಾರ ಬರುತ್ತೆ

ಬಾಗಲಕೋಟೆ: ಆರ್ಥಿಕ ಹಿಂಜರಿತ ಕೇವಲ ರಾಜ್ಯ ಮತ್ತು ದೇಶದಲ್ಲಿ ಅಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲೂ ಇದೆ. ಇದು ತಾತ್ಕಾಲಿಕ ಕೇಂದ್ರ ಸರ್ಕಾರ ಅನೇಕ ಪ್ಯಾಕೇಜ್ ಘೋಷಣೆ ಮಾಡಿದೆ. ಸ್ವಲ್ಪ ದಿನಗಳಲ್ಲಿ ಎಲ್ಲಾ ಸರಿಯಾಗುತ್ತದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯಿಂದ ಸಾಕಷ್ಟು ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‍ಡಿಆರ್‍ಎಫ್) ನಿಯಮದ ಅನುದಾನದ ಜೊತೆಗೆ ರಾಜ್ಯ ಸರ್ಕಾರ 6,200 ರೂ. ಸೇರಿಸಿ ತಾತ್ಕಾಲಿಕ ಹತ್ತು ಸಾವಿರ ಪರಿಹಾರ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ರೂ. ಕೊಡುತ್ತಿದ್ದೇವೆ. ಸರ್ಕಾರ ತಕ್ಷಣಕ್ಕೆ ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಬೆಳೆಹಾನಿಗೂ ಸಹ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಾಗುತ್ತದೆ. ಕೇಂದ್ರದಿಂದ ಇವತ್ತಲ್ಲ ನಾಳೆ ಪರಿಹಾರ ಬರುತ್ತದೆ. ಒಕ್ಕೂಟದ ವ್ಯವಸ್ಥೆ ಅನುದಾನದ ನಿರೀಕ್ಷೆಯಿಂದಲೇ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದರು.

ಇದೇ ವೇಳೆ 18 ತಿಂಗಳ ನಂತರ ಮತ ಭಿಕ್ಷೆ ಕೇಳಬೇಕಾಗುತ್ತದೆ ಎಂಬ ಕೋಡಿಹಳ್ಳಿ ಮಠದ ಶ್ರೀಗಳ ಭವಿಷ್ಯದ ವಿಚಾರವಾಗಿ ಮಾತನಾಡಿದ ಶೆಟ್ಟರ್, ಭವಿಷ್ಯದ ಮೇಲೆ ಸರ್ಕಾರ ನಡೆಯಲ್ಲ. ಕೆಲವರು ಮೂರು ತಿಂಗಳು ಅಂದರೆ ಮತ್ತೆ ಕೆಲವರು ಐದು ವರ್ಷ ಅಂತಾರೆ ಅದಕ್ಕೇನು ಹೇಳುತ್ತೀರಾ ಎಂದು ಪ್ರಶ್ನೆ ಮಾಡಿದರು.