Recent News

ಮಾಧ್ಯಮದವರಿಗೆ ಹೃದಯ ತುಂಬಿದ ಅಭಿನಂದನೆಗಳು – ಕುಮಾರಸ್ವಾಮಿ

ಬೆಂಗಳೂರು: ವಿಶ್ವಾಸ ಮತಯಾಚನೆಯಲ್ಲಿ ಸೋತ ಬಳಿಕ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಶ್ವಾಸ ಮತ ಯಾಚನೆಯ ಪ್ರಕ್ರಿಯೆ ಮುಗಿಸಿ ರಾಜಭವನಕ್ಕೆ ಕುಮಾರಸ್ವಾಮಿ ಹೋಗುತ್ತಿದ್ದರು. ಈ ವೇಳೆ ವಿಧಾನಸೌಧದಲ್ಲಿದ್ದ ಮಾಧ್ಯಮದ ವ್ಯಕ್ತಿಗಳು ಪ್ರತಿಕ್ರಿಯೆ ನೀಡಿ ಸರ್ ಎಂದು ಕೇಳಿದ್ದಾರೆ.

ಈ ವೇಳೆ, 14 ತಿಂಗಳು ಮೈತ್ರಿ ಸರ್ಕಾರದ ಆಡಳಿತಕ್ಕೆ ರಾಜ್ಯದ ಮಾಧ್ಯಮ ಮಿತ್ರರು ಕೊಟ್ಟ ಸಹಕಾರಕ್ಕೆ ನನ್ನ ಹೃದಯ ತುಂಬಿದ ಅಭಿನಂದನೆಗಳು ಎಂದು ಹೇಳಿ ಕೈ ಮುಗಿದು ಮೈತ್ರಿ ನಾಯಕರ ಜೊತೆ ತೆರಳಿದರು.

ವಿಶ್ವಾಸ ಮತಯಾಚನೆಯ ಸಮಯದಲ್ಲಿನ ವಿದಾಯ ಭಾಷಣದಲ್ಲಿ, ವಿದ್ಯುನ್ಮಾನ ಮಾಧ್ಯಮದ ವಿರುದ್ಧ ಹರಿಹಾಯ್ದಿದ್ದರು. ಎಲೆಕ್ಟ್ರಾನಿಕ್ ಮಾಧ್ಯಮದವರೇ ದೇಶ ಹಾಳು ಮಾಡಬೇಡಿ ಎಂದು ಕಿಡಿಕಾರಿದ್ದರು.

ಈ ಹಿಂದೆ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮಂಡ್ಯ ಕ್ಷೇತ್ರ ಹಾಗೂ ಅಲ್ಲಿನ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅವರ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮಾಧ್ಯಮಗಳಲ್ಲಿ ಬರೀ ಸುಮಲತಾ, ಮೋದಿ ಎಂದು ತೋರಿಸುತ್ತಿದ್ದೀರಾ? ನಿಮಗೆ ನಾನು ಈಗ ಉತ್ತರ ನೀಡಲ್ಲ. ಮೇ 23ಕ್ಕೆ ಉತ್ತರ ನೀಡುತ್ತೇನೆ. ಮಂಡ್ಯ ರಾಜಕಾರಣ, ಅಲ್ಲಿನ ಜನ ಏನು ಎಂದು ನನಗೆ ಗೊತ್ತು. ನೋಡುತ್ತಿರಿ ಮೇ 23ಕ್ಕೆ ಜನ ಏನು ಎಂದು ತೋರಿಸುತ್ತಾರೆ. ಪ್ರಧಾನಿ ಮೋದಿಯಿಂದ ಹಿಡಿದು ಎಲ್ಲಾ ಮಾಧ್ಯಮಗಳಲ್ಲೂ ಬರೀ ಸುಮಲತಾ, ಸುಮಲತಾ ಎಂದು ಹೇಳಿದ್ದೀರಾ. ಇದಕ್ಕೆಲ್ಲಾ ಮೇ 23ರ ನಂತರ ಉತ್ತರ ಸಿಗುತ್ತೆ. ಆಗ ಮಾತನಾಡುತ್ತೇನೆ ಎಂದು ಕಿಡಿಕಾರಿದ್ದರು.

ಕಳೆದ ತಿಂಗಳು ರಾಮನಗರದಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಕೂಡ ಮೀಡಿಯಾ ವಿರುದ್ಧ ಗರಂ ಆಗಿದ್ದರು. ಮಾಧ್ಯದವರರು ಹಾಳಾಗಿದ್ದೀರಿ. ನೀವು ಚುನಾವಣೆಗೆ ನಿಲ್ಲಿ ಅವಾಗ ಕಷ್ಟ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದರು.

ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾನೂನು ತರಲು ಚರ್ಚೆ ನಡೆಸಿದ್ದೇವೆ. ಕೆಲವೊಂದು ವಾಹಿನಿಗಳು ರಾಜಕಾರಣಿಗಳನ್ನು ವ್ಯಂಗ್ಯವಾಗಿ ತೋರಿಸುತ್ತಾರೆ. ನಾವೇನು ಬಿಟ್ಟಿ ಸಿಕ್ಕಿದ್ದೇವಾ? ನಮ್ಮ ಪ್ರತಿಯೊಂದು ಹೇಳಿಕೆಗಳನ್ನು ವ್ಯಂಗ್ಯವಾಗಿ ತೋರಿಸುವ ಅಧಿಕಾರವನ್ನು ಮಾಧ್ಯಮಗಳಿಗೆ ಯಾರು ನೀಡಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಈ ಸಮ್ಮಿಶ್ರ ಸರ್ಕಾರ ಸದೃಢವಾಗಿದ್ದು, ಅಷ್ಟೊಂದು ಸುಲಭವಾಗಿ ಹೋಗಲ್ಲ ಎಂದು ಗುಡುಗಿದ್ದರು.

ಬೆಂಗಳೂರಿನಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆಗಿನ ಸಭೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದ ಎಚ್‍ಡಿಕೆ, ನಿಮ್ಮಲ್ಲಿನ ಚರ್ಚೆ ಹಾಗೂ ಸುದ್ದಿಗಳಿಂದ ನಾನು ನಿಮಗೆ ಬಹಿಷ್ಕಾರ ಹಾಕಿದ್ದೇನೆ. ನಾನು ಮಾಧ್ಯಮಗಳಿಗೆ ಬಹಿಷ್ಕಾರ ಹಾಕಿದ್ದೇನೆ (ಐ ಆಮ್ ಬಾಯ್ಕಾಟಿಂಗ್ ಯುವರ್ ಸೆಲ್ಫ್) ಎಂದು ಹೇಳಿ ಸಿಟ್ಟಿನಿಂದಲೇ ತೆರಳಿದ್ದರು. ಅದೇನು ಸ್ಟೋರಿನೋ, ಅದೇನು ಚರ್ಚೆ ಮಾಡುತ್ತೀರೋ ಮಾಡಿಕೊಳ್ಳಿ. ಆ ಮೂಲಕ ಮಜಾ ಮಾಡಿ. ನಾನು ನಿಮ್ಮ ಜೊತೆ ಮಾತನಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದು ಕಿಡಿಕಾರಿದ್ದರು.

ವಿಶ್ವಾಸಮತದಲ್ಲಿಂದು 99 ಮಂದಿ ಶಾಸಕರು ಪರವಾಗಿ ಮತ ಚಲಾಯಿಸಿದರೆ, 105 ಮಂದಿ ಶಾಸಕರು ವಿರುದ್ಧವಾಗಿ ಚಲಾಯಿಸಿದ್ದರು. ಹೀಗಾಗಿ ಕುಮಾರಸ್ವಾಮಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸೋಲಾಗಿತ್ತು. 2018 ಮೇ 23ರಂದು ದೋಸ್ತಿ ಸರ್ಕಾರ ಅಧಿಕಾರಕ್ಕೆ ಏರಿತ್ತು. ಸರಿಯಾಗಿ 1 ವರ್ಷ 2 ತಿಂಗಳ ಬಳಿಕ ಮೈತ್ರಿ ಸರ್ಕಾರ ಈಗ ಪತನಗೊಂಡಿದೆ.

Leave a Reply

Your email address will not be published. Required fields are marked *