Sunday, 19th August 2018

Recent News

27 ಬೈಕ್ ಕದ್ದ 9 ಖತರ್ನಾಕ್ ಬಾಲಕರು ಅರೆಸ್ಟ್!

ಮುಂಬೈ: 27 ಬೈಕ್ ಗಳನ್ನು ಕಳವು ಮಾಡಿದ್ದ ಅಪ್ರಾಪ್ತ ವಯಸ್ಸಿನ 9 ಬಾಲಕರನ್ನು ಥಾಣೆಯ ಮುಂಬ್ರಾ ಪೊಲೀಸರು ಬಂಧಿಸಿದ್ದಾರೆ.

ಎಲ್ಲಾ ಬಾಲಕರು 10 ರಿಂದ 15 ವಯಸ್ಸಿನವರಾಗಿದ್ದಾರೆ. ನಕಲಿ ಕೀ ಅನ್ನು ಬಳಸಿ ಬೈಕ್ ಗಳನ್ನು ಕದಿಯುತ್ತಿದ್ದರು. ಬೇರೆ ಬೇರೆ ಬೈಕ್ ಗಳನ್ನು ಓಡಿಸುವ ಆಸೆ ಹೊಂದಿರುವ ಬಾಲಕರು ಅಪರಾಧವನ್ನು ಎಸೆಗಿದ್ದಾರೆ. ಪೆಟ್ರೋಲ್ ಖಾಲಿಯಾದ ನಂತರ ರಸ್ತೆಯಲ್ಲೇ ಬಿಡುತ್ತಿದ್ದರು ಎಂದು ಮುಂಬ್ರ ಪೊಲೀಸರು ತಿಳಿಸಿದ್ದಾರೆ.

ಥಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಗಳು ಕಾಣೆಯಾಗುತ್ತಿರುವ ದೂರುಗಳು ಜಾಸ್ತಿಯಾದ ಹಿನ್ನೆಲೆಯಲ್ಲಿ ಪ್ರತ್ಯೇಕ ತಂಡವನ್ನು ರಚಿಸುವಂತೆ ಪೊಲೀಸ್ ಆಯುಕ್ತ ಡಿ ಸ್ವಾಮಿ ಅವರು ಆದೇಶಿಸಿದ್ದರು.

ಬಾಲಕರು ವಾಹನಗಳನ್ನು ರಸ್ತೆಯಲ್ಲೇ ಬಿಟ್ಟುಹೋಗುತ್ತಿದ್ದನ್ನು ಅನುಮಾನಿಸಿದ ಸ್ಥಳೀಯರು ಅವರನ್ನು ಹಿಂಬಾಲಿಸಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಪೊಲೀಸರ ಬಳಿ ಬಾಲಕರು ಬೈಕ್ ಗಳನ್ನು ಕದಿಯುತ್ತಿದ್ದನ್ನು ಒಪ್ಪಿಕೊಂಡಿದ್ದಾರೆ.

ಕಳೆದ ನಾಲ್ಕು ತಿಂಗಳಿಂದ ಬೈಕ್ ಗಳನ್ನು ಕದಿಯುತ್ತಿದ್ದರು. ಅವರ ಬಳಿ ಇದ್ದ ನಕಲಿ ಕೀ ಗಳನ್ನು ವಶಪಡಿಸಿಕೊಂಡಿದ್ದೇವೆ. ಕೀ ಇಲ್ಲದೇ ಕೂಡ ಬೈಕ್ ಗಳನ್ನು ಸ್ಟಾರ್ಟ್ ಮಾಡುವುದನ್ನು ಬಾಲಕರು ಬಲ್ಲವರಾಗಿದ್ದಾರೆ ಎಂದು ಸ್ವಾಮಿ ತಿಳಿಸಿದರು.

ಬಾಲಕರನ್ನು ಕೌನ್ಸಿಲಿಂಗ್ ಮಾಡಿದ ಪೊಲೀಸರು ಅವರ ಪೋಷಕರೊಂದಿಗೂ ವಿಚಾರ ಮಾಡಿದ್ದಾರೆ. 9 ಬಾಲಕರಲ್ಲಿ 7 ಬಾಲಕರು ಶಾಲೆಯನ್ನು ಬಿಟ್ಟಿದ್ದಾರೆ ಹಾಗೂ ಇಬ್ಬರು ಶಾಲೆಗೆ ಹೋಗುತ್ತಿದ್ದಾರೆ ಎಂದು ತಿಳಿಸಿದರು. ಬಾಲಕರ ಮೇಲೆ ಸಂಬಂಧಪಟ್ಟ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಥಾಣೆ ಮತ್ತು ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕರನ್ನು ರಿಮ್ಯಾಂಡ್ ಹೋಮ್ ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *