Tuesday, 18th June 2019

ಐತಿಹಾಸಿಕ ಗೆಲುವಿನ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ರವಿಶಾಸ್ತ್ರಿ

ಸಿಡ್ನಿ: ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಪಡೆದು ದಾಖಲೆ ನಿರ್ಮಿಸಿದ ಕೆಲವೇ ಕ್ಷಣಗಳಲ್ಲಿ ತಂಡದ ಕೋಚ್ ರವಿಶಾಸ್ತ್ರಿ ವಿವಾದಾತ್ಮಕ ಹೇಳಿಕೆ ನೀಡಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರವಿಶಾಸ್ತ್ರಿ, ನನಗೆ ಈ ಟೆಸ್ಟ್ ಸರಣಿಯ ಗೆಲುವು ಎಷ್ಟು ಸಮಾಧಾನ ತಂದಿದೆ ಎಂದರೆ, 1983 ವಿಶ್ವಕಪ್ ಮತ್ತು 1985ರ ವಿಶ್ವ ಚಾಂಪಿಯನ್‍ಶಿಪ್ ಗೆಲುವಿಗಿಂತ ದೊಡ್ಡದು. ಏಕೆಂದರೆ ಇದು ಕ್ರಿಕೆಟ್‍ನ ಟೆಸ್ಟ್ ಮಾದರಿಯಲ್ಲಿ ಪಡೆದ ಗೆಲುವಾಗಿದೆ ಎಂದು ಹೇಳಿದ್ದಾರೆ.

ರವಿಶಾಸ್ತ್ರಿ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸುನಿಲ್ ಗವಾಸ್ಕರ್, ರವಿಶಾಸ್ತ್ರಿ ಅವರ ಹೇಳಿಕೆ ಟೆಸ್ಟ್ ಕ್ರಿಕೆಟ್ ಸಂಬಂಧಿಸಿದ್ದು, 1983 ಮತ್ತು 1985 ರ ಗೆಲುವು ಸಿಮೀತ ಓವರ್ ಗಳ ಟೂರ್ನಿಗಳ ಭಾಗವಾಗಿದ್ದು, ಅವರಿಗೆ ಆಸೀಸ್ ಟೆಸ್ಟ್ ಸರಣಿ ಬಹುದೊಡ್ಡ ಗೆಲುವಾಗಿದೆ. ಏಕೆಂದರೆ ಈ ಹಿಂದಿನ ಗೆಲುವುಗಳು ಕ್ರಿಕೆಟ್ 50 ಓವರ್ ಗಳ ಮಾದರಿಯಲ್ಲಿ ಲಭಿಸಿತ್ತು. ಆದರೆ ಟೆಸ್ಟ್ ಮಾದರಿಯಲ್ಲಿ ಈ ಗೆಲುವು ತಂಡದ ಕೋಚ್ ಆಗಿರುವ ಅವರಿಗೆ ಹೆಚ್ಚು ಸಂತಸ ತಂದಿದೆ. ಆದ್ದರಿಂದಲೇ ರವಿಶಾಸ್ತ್ರಿ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ತಮ್ಮ ಹೇಳಿಕೆ ವೇಳೆ ಕ್ರಿಕೆಟ್ ದೇವರ ಹೆಸರನ್ನು ಪ್ರಸ್ತಾಪ ಮಾಡಿರುವ ಕೋಚ್ ರವಿಶಾಸ್ತ್ರಿ, ಈ ತಂಡ ದೇವರು, ದೇವಾಂಶ ಸಂಭೂತರು, ಹಿರಿಯ, ಕಿರಿಯ ಆಟಗಾರರು ಎಂಬ ಬೇದ ಇರುವ ತಂಡವಲ್ಲ. ದೇಶಕ್ಕಾಗಿ ಆಡುವ ಯುವ ಆಟಗಾರರ ತಂಡವಾಗಿದೆ ಎಂದು ಪರೋಕ್ಷವಾಗಿ ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಟಾಂಗ್ ನೀಡಿದ್ದಾರೆ.

ರವಿಶಾಸ್ತ್ರಿ ಅವರ ಹೇಳಿಕೆಗೆ ಕೆಲ ವಿಶ್ಲೇಷಕರು ಸಾಥ್ ನೀಡಿ ಸ್ಪಷ್ಟನೆ ನೀಡಿದ್ದರೆ, ಅಭಿಮಾನಿಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *