Crime
ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳೊಂದಿಗೆ ತಾಯಿ ವಿಷಸೇವಿಸಿ ಆತ್ಮಹತ್ಯೆ

– ಹಿರಿಯ ಮಗಳಿಗೆ ಫಿಕ್ಸ್ ಆಗಿತ್ತು ಮದುವೆ
ಹೈದರಾಬಾದ್: ತಾಯಿಯೊಬ್ಬಳು ತನ್ನಿಬ್ಬರು ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.
ಗೋವಿಂದಮ್ಮ(48), ಮಕ್ಕಳನ್ನು ರಾಧಿಕಾ(30) ಹಾಗೂ ರಮ್ಯ(28) ಆತ್ಮಹತ್ಯೆ ಮಾಡಿಕೊಂಡ ತಾಯಿ- ಮಕ್ಕಳು. ತೆಲಂಗಾಣದ ಖಮ್ಮಂನಲ್ಲಿರು ರಾಘವ ಥಿಯೇಟರ್ ಬಳಿ ಕುಟುಂಬ ವಾಸವಾಗಿತ್ತು. ಗೋವಿಂದಮ್ಮನ ಪತಿ ಚಿನ್ನದ ಕೆಲಸ ಮಾಡುತ್ತಿದ್ದು, ಈ ಮೂಲಕ ಬದುಕಿನ ಬಂಡಿ ಸಾಗುತ್ತಿತ್ತು.
ಒಟ್ಟಿನಲ್ಲಿ ಕಡುಬಡತನದಿಂದ ಬದುಕುತ್ತಿರುವ ಈ ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳು ಮದುವೆಯ ವಯಸ್ಸಿಗೆ ಬಂದಿದ್ದಾರೆ. ಹೀಗಾಗಿ ಕುಟುಂಬದವರು ಹಿರಿಯ ಮಗಳಿಗೆ ಮದುವೆ ಮಾಡುವ ನಿರ್ಧಾರ ಮಾಡಿದರು. ಅಂತೆಯೇ ಮಗಳು ರಾಧಿಕಾ ಮದುವೆ ನಿಶ್ಚಯವಾಗಿದ್ದು, ಜನವರಿಯಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಇತ್ತ ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಕುಟುಂಬದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಪರಿಣಾಮ ಮಗಳ ಮದುವೆ ಮಾಡಲು ಅಸಾಧ್ಯ ಎನ್ನುವಷ್ಟು ಆರ್ಥಿಕವಾಗಿ ಕುಗ್ಗಿ ಹೋಯಿತು.
ಹುಡುಗನ ಕಡೆಯವರು ವರದಕ್ಷಿಣೆ ಕೂಡ ಕೇಳಿರಲಿಲ್ಲ. ಆದರೂ ಮಗಳ ಮದುವೆ ಬಗ್ಗೆಯೇ ಕುಟುಂಬ ಚಿಂತೆಯಲ್ಲಿತ್ತು. ಮನೆಯ ಯಜಮಾನನ್ನು ಬಿಟ್ಟು ತಾಯಿ ಹಾಗೂ ಇಬ್ಬರು ಮಕ್ಕಳು ಬುಧವಾರ ಚಿನ್ನ ಶುಚಿಗೊಳಿಸುವ ರಾಸಾಯನಿಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಕೆಲಸ ಮುಗಿಸಿಕೊಂಡು ಪತಿ ಮನೆಗೆ ಹಿಂದುರುಗಿದಾಗ ಪತ್ನಿ ಹಾಗೂ ಮಕ್ಕಳ ಶವ ಕಂಡು ದಂಗಾಗಿದ್ದಾರೆ.
ಘಟನೆಯಿಂದ ಆಘಾತಗೊಂಡ ಪತಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
