Wednesday, 11th December 2019

ವೇದಿಕೆ ಮೇಲೆ ಹೊಡೆದಾಡಿಕೊಂಡ ‘ಕೈ’ ನಾಯಕರು: ವಿಡಿಯೋ ನೋಡಿ

ಹೈದರಾಬಾದ್: ಕಾಂಗ್ರೆಸ್ ನಾಯಕರಿಬ್ಬರು ವೇದಿಕೆಯ ಮೇಲೆ ಹೊಡೆದಾಡಿಕೊಂಡ ಪ್ರಸಂಗ ಇಂದು ತೆಲಂಗಾಣದ ರಾಜಧಾನಿ ಹೈದರಾಬಾದ್‍ನಲ್ಲಿ ನಡೆದಿದೆ.

ರಾಜ್ಯ ಸರ್ಕಾರದ ವಿರುದ್ಧ ನಡೆಸಿದ್ದ ಪ್ರತಿಭಟನಾ ವೇದಿಕೆಯಲ್ಲಿ ಕಾಂಗ್ರೆಸ್‍ನ ಮುಖಂಡರಾದ ವಿ. ಹನುಮಂತ್ ರಾವ್ ಹಾಗೂ ನಾಗೇಶ್ ಮುಡಿರಾಜ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಮಾಧ್ಯಮದವರು ಮೊಬೈಲ್, ವಿಡಿಯೋ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಹರಿದಾಡುತ್ತಿದೆ.

ರಾಜ್ಯ ಪರೀಕ್ಷಾ ಮಂಡಳಿಯು ಫಲಿತಾಂಶ ಎಡವಟ್ಟು ಪ್ರಶ್ನಿಸಿ ವಿರೋಧ ಪಕ್ಷಗಳು ಪ್ರತಿಭಟನೆಗೆ ಕರೆ ಕೊಟ್ಟಿದ್ದವು. ಈ ನಿಟ್ಟಿನಲ್ಲಿ ತೆಲುಗು ದೇಶಂ ಪಾರ್ಟಿ (ಟಿಡಿಪಿ), ಕಾಂಗ್ರೆಸ್ ಹಾಗೂ ಪಕ್ಷೇತರರು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಸರ್ಕಾರದ ವಿರುದ್ಧ ಇಂದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳೀಯ ಮುಖಂಡ ನಾಗೇಶ್ ಮುಡಿರಾಜ್ ಹಾಗೂ ವಿ.ಹನುಮಂತ್ ರಾವ್ ನಡುವೆ ಮಾತಿಗೆ ಮಾತು ಬೆಳೆದಿದ್ದು, ವೇದಿಕೆ ಮೇಲೆ ಕೈ ಕೈ ಮಿಲಾಯಿಸಿದ್ದಾರೆ.

ಪರಿಸ್ಥಿತಿ ಕೈಮೀರುತ್ತಿದ್ದಂತೆ ಕೆಲವರು ಮಧ್ಯಪ್ರವೇಶ ಮಾಡಿದ್ದಾರೆ. ಆದರೆ ವಿ.ಹನುಮಂತ್ ರಾವ್ ಅವರು ನಾಗೇಶ್ ಅವರನ್ನು ವೇದಿಕೆಯಿಂದ ಕೆಳಗೆ ತಳ್ಳಿದ್ದಾರೆ. ಪೊಲೀಸ್ ಭದ್ರತೆಯ ನಡುವೆಯೇ ಈ ಘಟನೆ ನಡೆದಿದೆ.

ತೆಲಂಗಾಣದಲ್ಲಿ ಏಪ್ರಿಲ್ 18ರಂದು ಪ್ರಕಟವಾದ ಪದವಿ ಪೂರ್ವ ಪರೀಕ್ಷೆ ಫಲಿತಾಂಶ ರಾಜ್ಯದ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಕಂಗೆಡಿಸಿತ್ತು. ಆಘಾತಕ್ಕೆ ಒಳಗಾದ 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿ ಕೊಂಡಿದ್ದರು. ಪರೀಕ್ಷೆಗೆ ಹಾಜರಾಗಿದ್ದ 9 ಲಕ್ಷ ವಿದ್ಯಾರ್ಥಿಗಳ ಪೈಕಿ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕೆಲವು ಮಕ್ಕಳ ನಿಜವಾದ ಅಂಕ 99 ಆಗಿದ್ದರೂ ಅವರಿಗೆ ಬಂದ ಫಲಿತಾಂಶದಲ್ಲಿ ಸೊನ್ನೆ ಕೊಡಲಾಗಿತ್ತು.

Leave a Reply

Your email address will not be published. Required fields are marked *