Connect with us

Latest

ಗೆದ್ದವರು ಎಲ್ಲೂ ಹೋಗ್ಬೇಡಿ, ನಾವೇ ಸರ್ಕಾರ ರಚಿಸೋದು: ತೇಜಸ್ವಿ ಯಾದವ್

Published

on

Share this

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಂದ್ರೂ ರಾಜಕೀಯ ಚಟುವಟಿಕೆಗಳು ಮಾತ್ರ ಇನ್ನು ಮುಂದುವರಿದಿದೆ. ಮಹಾಘಟಬಂಧನದ ನಾಯಕ ಆರ್ ಜೆಡಿಯ ತೇಜಸ್ವಿ ಯಾದವ್, ಗೆದ್ದ ತಮ್ಮ ಎಲ್ಲ ನಾಯಕರಿಗೆ ಸಂದೇಶ ರವಾನಿಸಿದ್ದಾರೆ. ಮುಂದಿನ ಒಂದು ತಿಂಗಳು ಯಾರು ಪಾಟ್ನಾ ನಗರದಿಂದ ಹೊರ ಹೋಗಬೇಡಿ. ಕಾರಣ ನಾವೇ ಸರ್ಕಾರ ರಚಿಸುತ್ತೇವೆ ಎಂದಿದ್ದಾರೆ ಅಂತ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇಂದು ಪಾಟ್ನಾದಲ್ಲಿರುವ ಮಾಜಿ ಸಿಎಂ, ಆರ್‍ಜೆಡಿ ನಾಯಕಿ ರಾಬ್ಡಿ ದೇವಿಯವರ ನಿವಾಸದಲ್ಲಿ ಮಹಾಘಟಬಂಧನದ ಎಲ್ಲ ಮುಖಂಡರು ಸೇರಿ ಆತ್ಮಾವಲೋಕನ ಸಭೆ ನಡೆಸಿದರು. ಈ ವೇಳೆ ತೇಜಸ್ವಿ ಯಾದವ್ ತಾವೇ ಸರ್ಕಾರ ರಚಿಸೋದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಮ್ಯಾಜಿಕ್ ನಂಬರ್ ಪಡೆದಿರೋ ಎನ್‍ಡಿಎ ಒಕ್ಕೂಟದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಮಹಾಘಟಬಂಧನ ನಾಯಕರ ನಂಬಿಕೆ. ಸರ್ಕಾರ ರಚನೆ ವೇಳೆ ಉಂಟಾಗುವ ಭಿನ್ನಮತವನ್ನ ಲಾಭವಾಗಿ ಬಳಸಿಕೊಳ್ಳಲು ತೇಜಸ್ವಿ ಯಾದವ್ ಆ್ಯಂಡ್ ಟೀಂ ಪ್ಲಾನ್ ಮಾಡಿಕೊಂಡಿದೆಯಂತೆ. ಹಾಗಾಗಿ ಗೆದ್ದಿರೋ ಎಲ್ಲ ಜನಪ್ರತಿನಿಧಿಗಳನ್ನ ಪಾಟ್ನಾದಲ್ಲಿಯೇ ಉಳಿದುಕೊಳ್ಳುವಂತೆ ತೇಜಸ್ವಿ ಯಾದವ್ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು ಕಾಂಗ್ರೆಸ್ ಕೆಲ ನಾಯಕರು ಬಿಜೆಪಿಗೆ ಜಂಪ್ ಆಗುವ ಆತಂಕವೂ ಇದೆ ಎನ್ನಲಾಗಿದ್ದು, ಎಲ್ಲರನ್ನ ತನ್ನ ಕಣ್ಣಂಚಿನಲ್ಲಿಟ್ಟುಕೊಳ್ಳಲು ತೇಜಸ್ವಿ ತೀರ್ಮಾನಿಸಿರುವ ಕುರಿತು ವರದಿಗಳು ಪ್ರಕಟವಾಗುತ್ತಿವೆ.

ತಮ್ಮ ನಾಯಕರ ಜೊತೆಗಿನ ಸಭೆ ಬಳಿಕ ಮಾತನಾಡಿದ ತೇಜಸ್ವಿ ಯಾದವ್, ನಮಗೆ ಜನರ ಸಮರ್ಥನೆ ಇದೆ. ನಾವು 130 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, ನಿತೀಶ್ ಕುಮಾರ್ ಮೋಸದಿಂದ ಸರ್ಕಾರ ರಚನೆಗೆ ಮುಂದಾಗ್ತಿದ್ದಾರೆ. ಹಲವು ಕ್ಷೇತ್ರಗಳ ಮತ ಎಣಿಕೆ ವೇಳೆ ಮೋಸದಾಟ ನಡೆದಿದೆ ಎಂದು ಆರೋಪಿಸಿದ್ದಾರೆ.

243 ವಿಧಾನಸಭಾ ಕ್ಷೇತ್ರದಲ್ಲಿ ಎನ್‍ಡಿಎ ಮ್ಯಾಜಿಕ್ ನಂಬರ್ 122ನ್ನು ದಾಟಿ 125 ಕ್ಷೇತ್ರಗಳಲ್ಲಿ ಸ್ಪಷ್ಟ ಬಹುಮತವನ್ನು ಪಡೆದಿದೆ. ಮಹಾಘಟಬಂಧನ್ 110 ಸ್ಥಾನಗಳಲ್ಲಿ ಗೆದ್ದಿದ್ದು, ಇತರರು 8ರಲ್ಲಿ ವಿಜಯದ ನಗೆ ಬೀರಿದ್ದಾರೆ. ತೇಜಸ್ವಿ ಯಾದವ್ ನೇತೃತ್ವದ ಆರ್ ಜೆಡಿಯ ಏಕಾಂಗಿ ಹೋರಾಟದ ಹೊರತಾಗಿಯೂ ಮಹಾಘಟಬಂಧನ್ ಅಧಿಕಾರ ವಂಚಿತವಾಗಿದೆ.

ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಆರ್ ಜೆಡಿ: ಬಿಹಾರದಲ್ಲಿ ಮತದಾರ ಮೋದಿ-ನಿತೀಶ್ ಜೋಡಿಗೆ ಜೈ ಅಂದಿದ್ದಾನೆ. ಯಾವ್ಯಾವ ಪಕ್ಷದ ಎಷ್ಟೆಷ್ಟು ಸಾಧನೆ ಅಂತ ನೋಡೋದಾದ್ರೆ, ಬಿಜೆಪಿ 74 ಕ್ಷೇತ್ರಗಳಲ್ಲಿ ವಿಜಯದ ನಗೆ ಬೀರುವ ಮೂಲಕ ಎನ್‍ಡಿಎ ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು, ಲೋಕ ಜನಶಕ್ತಿ ಪಾರ್ಟಿಯ ಚಿರಾಗ್ ಪಾಸ್ವಾನ್ ನೀಡಿದ ಏಟಿನಿಂದಾಗಿ ಮೂರನೇ ಸ್ಥಾನಕ್ಕೆ ಕುಸಿದಿದ್ದು 43 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ 75 ಕ್ಷೇತ್ರದಲ್ಲಿ ಗೆದ್ದು ಬಿಹಾರದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‍ನಿಂದ ನಿರೀಕ್ಷಿತ ಬೆಂಬಲ ಸಿಗದೇ ಅಧಿಕಾರದಿಂದ ದೂರ ಉಳಿಯಬೇಕಾಗಿದೆ. ಇನ್ನು ಇನ್ನು, ವಿಕಾಸಶೀಲ ಇನ್ಸಾನ್ ಪಾರ್ಟಿ ಮತ್ತು ಜೀತನ್ ರಾಮ್ ಮಾಂಝಿ ಅವರ ಎಚ್‍ಎಎಂ ತಲಾ 4 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಹೀಗಾಗಿ ಜೆಡಿಯು ಕಳಪೆ ಸಾಧನೆಯ ಹೊರತಾಗಿಯೂ ಎಚ್‍ಎಎಂ ಮತ್ತು ವಿಐಪಿ ಉತ್ತಮ ಪ್ರದರ್ಶನದಿಂದ ಎನ್‍ಡಿಎ ತನ್ನಲ್ಲಿಯೇ ಅಧಿಕಾರ ಉಳಿಸಿಕೊಂಡಿದೆ.

Click to comment

Leave a Reply

Your email address will not be published. Required fields are marked *

Advertisement