ಬೆಂಗಳೂರು: ಇತ್ತೀಚಿಗೆ ಜಾನಪದ ಸಾಹಿತ್ಯ ಸಿನಿಮಾ ಹಾಡಿಗೆ ಅಥವಾ ಇತರೆ ಸಂಗೀತ ಶೈಲಿಗೆ ಎಲ್ಲೋ ಮರೆಯಾಗುತ್ತಿದೆ. ಆದರೆ ನೆಲಮಂಗಲ ಪಟ್ಟಣದಲ್ಲಿ ಶಿಕ್ಷಕರ ತಂಡವೊಂದು ಜಾನಪದ ಸಾಹಿತ್ಯಕ್ಕೆ ಒತ್ತು ಕೊಟ್ಟು, ಗಣಪತಿ ದೇವರಿಗೆ ಗೀತೆಯನ್ನು ಸರ್ಮಪಿಸಿ ಭಜನೆ ಮಾಡಿ ಎಲ್ಲರ ಮನ ಗೆದ್ದಿದ್ದಾರೆ.
ನೆಲಮಂಗಲ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಗಣಪತಿ ದೇವಾಲಯವಿದೆ. ಅಲ್ಲಿ ಶಿಕ್ಷಕರ ಗುಂಪೊಂದು ಜಾನಪದ ಗೀತೆಯನ್ನು ಹಾಡಿ ಭಜನೆ ಮಾಡಿದ್ದಾರೆ. ಅಲ್ಲದೆ ಹಾಡಿನ ಜೊತೆ ತಮ್ಮದೇ ಭಂಗಿಯಲ್ಲಿ ಕುಣಿದು ಭಕ್ತಿ ಮೆರೆದಿದ್ದಾರೆ. ಈ ಮೂಲಕ ಜಾನಪದ ಗೀತೆಗೆ ಶಿಕ್ಷಕ ತಂಡದ ಮೆರಗು ತಂದಿದೆ. ದೇವಾಲಯದಲ್ಲಿ ಹಾಡುತ್ತಾ, ಕುಣಿಯುತ್ತಾ ಶಿಕ್ಷಕರು ಭಜನೆ ಮಾಡುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆಹಿಡಿದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕರ ಜಾನಪದ ಪ್ರೀತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜಾನಪದ ಗೀತೆ ‘ಚಲ್ಲಿದರು ಮಲ್ಲಿಗೆಯ’ ಮಾದಪ್ಪನ ಹಾಡಿಗೆ ಫುಲ್ ಜೋಶ್ನಲ್ಲಿ ಶಿಕ್ಷಕರ ತಂಡ ಹೆಜ್ಜೆ ಹಾಕಿದೆ. ಹಾಗೆಯೇ ಜಾನಪದ ಗೀತೆಗಳನ್ನು ಉಳಿಸುವ ನಿಟ್ಟಿನಲ್ಲಿ ಮಾರುತಿ ಬಡಾವಣೆಯ ಜನರು ಪ್ರೋತ್ಸಾಹ ತೋರುತ್ತಿದ್ದಾರೆ. ಆಧುನಿಕ ಯುಗದಲ್ಲಿ ಜಾನಪದ ಗೀತೆಗಳಿಗೆ ತಂಡ ಪ್ರಾಮುಖ್ಯತೆ ನೀಡಿರುವುದು ನೆಟ್ಟಿಗರ ಗಮನ ಸೆಳೆದಿದೆ.