Connect with us

Chikkamagaluru

ಲಾರಿ, ಕಾರು ಮುಖಾಮುಖಿ ಡಿಕ್ಕಿಗೆ ಶಿಕ್ಷಕ ಬಲಿ

Published

on

ಚಿಕ್ಕಮಗಳೂರು: ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರ ಸಮೀಪದ ಎಲೆಕಲ್ ಘಾಟಿಯ ಬಳಿ ನಡೆದಿದೆ.

45 ವರ್ಷದ ಈಶ್ವರ ಮೃತಪಟ್ಟ ದುರ್ದೈವಿ. ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿ ಮಹದೇವ್‍ಗೆ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಈಶ್ವರ್ ಎನ್.ಆರ್.ಪುರ ತಾಲೂಕಿನ ಹೊಸಕೆರೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕಾರು ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಹೋಗುತ್ತಿತ್ತು. ಲಾರಿ ಬಾಳೆಹೊನ್ನೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿತ್ತು. ಈ ಸಂದರ್ಭದಲ್ಲಿ ಎಲೆಕಲ್ ಘಾಟಿಯ ಬಳಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಪರಿಣಾಮ ಈಶ್ವರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಅಪಘಾತಕ್ಕೆ ಕಾರಿನ ಅತಿಯಾದ ವೇಗವೇ ಕಾರಣ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.