ಅಂಗನವಾಡಿಯಲ್ಲಿ ಆಹಾರ ಪದಾರ್ಥ ಕದಿಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕಿ

ಹಾವೇರಿ: ಅಂಗನವಾಡಿಯಲ್ಲಿನ ಮಕ್ಕಳು ಮತ್ತು ಗರ್ಭಿಣಿಯರ ಆಹಾರ ಪದಾರ್ಥಗಳಿಗೆ ಕನ್ನ ಹಾಕುತ್ತಿದ್ದಾಗ ಶಿಕ್ಷಕಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಇಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಜಿಲ್ಲೆಯ ರಾಣೇಬೆನ್ನೂರಿನ ಬಸವನಗುಡಿ ನಗರದ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಅಂಗನವಾಡಿಯಲ್ಲಿನ ಆಹಾರ ಪದಾರ್ಥಗಳನ್ನು ಕದ್ದು ಸಾಗಿಸುತ್ತಿದ್ದಾಗ ಶಿಕ್ಷಕಿ ಸರೋಜಾ ಲಾಳಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಇಬ್ಬರೂ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆಗ ಸ್ಥಳೀಯರು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂಗನವಾಡಿ ಕೇಂದ್ರದಲ್ಲಿನ ಎಣ್ಣೆ, ಅಕ್ಕಿ, ತೊಗರಿಬೇಳೆ, ಹೆಸರು ಕಾಳು, ಶೇಂಗಾ ಕಾಳು, ಹಾಲಿನ ಪುಡಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಕದ್ದು ಮನೆಗೆ ಸಾಗಿಸುತ್ತಿದ್ದರು. ಅಲ್ಲದೆ ಬೂಸ್ಟ್ ಹತ್ತಿದ ಮತ್ತು ಹಾಳಾಗಿರುವ ಪದಾರ್ಥಗಳನ್ನು ಅಂಗನವಾಡಿಯಲ್ಲಿಟ್ಟು ಗುಣಮಟ್ಟದ ಪದಾರ್ಥಗಳನ್ನು ತಮ್ಮ ಮನೆಗೆ ಸಾಗಿಸುತ್ತಿದ್ದರು.

ಸ್ಥಳೀಯರು ಅಂಗನವಾಡಿ ಕೇಂದ್ರದ ಮುಂದೆ ಜಮಾಯಿಸುತ್ತಿದ್ದಂತೆ ಶಿಕ್ಷಕಿ ಸರೋಜಾ ಅಲ್ಲಿಂದ ಕಾಲ್ಕಿತ್ತಿದ್ದು, ಈ ಕುರಿತು ಸ್ಥಳೀಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *