Connect with us

ಕೇರಳದಲ್ಲಿ ತೌಕ್ತೆ ಚಂಡಮಾರುತ, ಭಾರೀ ಪ್ರವಾಹ – ಕರ್ನಾಟಕಕ್ಕೂ ಎಫೆಕ್ಟ್, 7 ಜಿಲ್ಲೆಯಲ್ಲಿ ರೆಡ್ ಅಲರ್ಟ್

ಕೇರಳದಲ್ಲಿ ತೌಕ್ತೆ ಚಂಡಮಾರುತ, ಭಾರೀ ಪ್ರವಾಹ – ಕರ್ನಾಟಕಕ್ಕೂ ಎಫೆಕ್ಟ್, 7 ಜಿಲ್ಲೆಯಲ್ಲಿ ರೆಡ್ ಅಲರ್ಟ್

– ಉಡುಪಿಯಲ್ಲಿ ಕಡಲ್ಕೊರೆತ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೌದ್ರನರ್ತನದ ನಡುವೆ ವರುಣನ ಅರ್ಭಟ ಜೋರಾಗಿದೆ. ತೌಕ್ತೆ ಚಂಡಮಾರುತದ ಹಿನ್ನಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೆಡ್, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಜನ 2 ದಿನಗಳ ಕಾಲ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಕೇರಳದಲ್ಲಿ ಕೊರೊನಾ ಸೋಂಕಿನ ಆರ್ಭಟ ಹೆಚ್ಚಿರುವಾಗಲೇ ಈಗ ಸೈಕ್ಲೋನ್ ಅಬ್ಬರ ಶುರುವಾಗಿದೆ. ಅರಬ್ಬೀ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಠಿಸಿದೆ. ದೇವರನಾಡಲ್ಲಿ ಭಾರೀ ಮಳೆಯಾಗುತ್ತಿದ್ದು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ. ತಿರುನಂತಪುರಂ, ವಯನಾಡು, ಕೊಯಿಕ್ಕೋಡ್, ಕಾಸರಗೋಡು ಸೇರಿ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇರಳದ 8 ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿದ್ದು ರಸ್ತೆಗಳೆಲ್ಲಾ ನದಿಯಂತೆ ಭಾಸವಾಗ್ತಿದೆ. ಮನೆಗಳೆಲ್ಲಾ ಕೊಚ್ಚಿಹೋಗಿದೆ. ಸಮುದ್ರದಲ್ಲಿ ರಕ್ಕಸ ಅಲೆಗಳು ಏರುತ್ತಿದೆ.

ನಾಡಿದ್ದು ತೌಕ್ತೆ ಚಂಡಮಾರುತ ಅಪ್ಪಳಿಸಲಿದ್ದು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‍ಗೂ ಈ ಎಫೆಕ್ಟ್ ತಟ್ಟಲಿದೆ. ಕರ್ನಾಟಕದ ಕರಾವಳಿ ಪ್ರದೇಶಕ್ಕೂ ಚಂಡಮಾರುತದ ಎಫೆಕ್ಟ್ ಇರಲಿದ್ದು ಈಗಾಗಲೇ ಮಳೆ ಆರಂಭವಾಗಿದೆ. ಅಲ್ಲದೇ ಮುಂದಿನ 3 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಚಿಕ್ಕಮಗಳೂರು, ಶಿವಮೊಗ್ಗ, ಹಾಸನದಲ್ಲೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಉಡುಪಿಯ ಮರವಂತೆ ಕಡಲತೀರದಲ್ಲಿ ಭಾರಿ ಹಾನಿಯಾಗಿದೆ. ದೊಡ್ಡ ದೊಡ್ಡ ಅಲೆಗಳ ಹೊಡೆತಕ್ಕೆ ಕಡಲ್ಕೊರೆತವಾಗಿ ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಅಲೆಗಳ ತೀವ್ರತೆ ಮುಂದುವರಿದರೆ ಮೀನುಗಾರಿಕಾ ರಸ್ತೆಗೆ ಹಾನಿಯಾಗುವ ಸಾಧ್ಯತೆಯಿದೆ. ಇದರ ನಡುವೆ ಕೊಡಗಿನ ಭಾಗಮಂಡಲ, ಕೋರಂಗಾಲ ಸುತ್ತಮುತ್ತ ಹೆಚ್ಚು ಮಳೆಯಾಗಲಿದ್ದು, ಜನರು ಎಚ್ಚರದಿಂದ ಇರಬೇಕು. ಜನರು ಎರಡು ದಿನಗಳ ಕಾಲ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮೈಕ್‍ನಲ್ಲಿ ಮನವಿ ಮಾಡಿದೆ.

ಕರಾವಳಿ ಜಿಲ್ಲೆ, ಮಲೆನಾಡಲ್ಲಿ ಮಾತ್ರವಲ್ಲದೇ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಸಾಧಾರಣ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ.

Advertisement
Advertisement