Thursday, 12th December 2019

Recent News

‘ಸಿಂಗ’ನಿಗೆ ಸಾಥ್ ಕೊಟ್ಟ ತಾರಾ ಪಾತ್ರ ಹೇಗಿದೆ ಗೊತ್ತಾ?

ಬೆಂಗಳೂರು: ಉದಯ್ ಮೆಹ್ತಾ ನಿರ್ಮಾಣದ ಸಿಂಗ ತೆರೆಗಾಣಲು ದಿನಗಣನೆ ಶುರುವಾಗಿದೆ. ಎಲ್ಲ ದಿಕ್ಕುಗಳಿಂದಲೂ ಪ್ರೇಕ್ಷಕರನ್ನು ಆವರಿಸಿಕೊಂಡಿರೋ ಈ ಸಿನಿಮಾ ಅದ್ಧೂರಿ ತಾರಾಗಣದೊಂದಿಗೆ, ಅಚ್ಚರಿದಾಯಕ ಪಾತ್ರಗಳೊಂದಿಗೆ, ಮಜವಾದೊಂದು ಹಳ್ಳಿ ಹಿನ್ನೆಲೆಯ ಕಥೆಯೊಂದಿಗೆ ಇದೇ ತಿಂಗಳ ಹತ್ತೊಂಬತ್ತರಂದು ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ.

ಈ ಹಿಂದೆ ರಾಮ್ ಲೀಲಾ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಜಯ್ ಕಿರಣ್ ಅವರ ಎರಡನೇ ಕನಸಿನಂಥಾ ಚಿತ್ರ ಸಿಂಗ. ಈ ಮೂಲಕ ಚಿರಂಜೀವಿ ಸರ್ಜಾ ಹಳ್ಳಿ ಶೇಡಿನ ಪಾತ್ರದ ಜೊತೆ ಜೊತೆಗೇ ಮಾಸ್ ಲುಕ್ಕಿನಲ್ಲಿ ಅಬ್ಬರಿಸಿದ್ದಾರೆ. ಹಿರಿಯ ನಟಿ ತಾರಾ ಒಂದು ಅದ್ಭುತವಾದ ಪಾತ್ರದ ಮೂಲಕ ಸಿಂಗನಿಗೆ ಸಾಥ್ ಕೊಟ್ಟಿದ್ದಾರೆ. ಅವರು ಇಡೀ ಸಿನಿಮಾದಲ್ಲಿ ತೊಡಗಿಕೊಂಡಿರೋ ರೀತಿ, ತಮ್ಮ ಪಾತ್ರಕ್ಕೆ ಜೀವ ತುಂಬಿರೋ ಪರಿ ಕಂಡು ಒಂದಿಡೀ ಚಿತ್ರ ತಂಡ ಥ್ರಿಲ್ ಆಗಿದೆ. ಅಂಥಾದ್ದೇ ಭಾವ ಪ್ರೇಕ್ಷಕರನ್ನೂ ಕಾಡುವುದು ಖಚಿತ ಎಂಬ ಭರವಸೆ ನಿರ್ದೇಶಕ ವಿಜಯ್ ಕಿರಣ್ ಅವರಲ್ಲಿಯೂ ಇದೆ.

ತಾರಾ ಎಂಥಾದ್ದೇ ಪಾತ್ರಕ್ಕಾದರೂ ಭಾವ ತುಂಬಿ ಅಭಿನಯಿಸೋ ಕಲಾವಿದೆ. ಒಂದು ಕಾಲಕ್ಕೆ ಬೆಳ್ಳಿ ತೆರೆಯಲ್ಲಿ ನಾಯಕಿಯಾಗಿ ಮಿಂಚಿದ್ದ ಅವರು ಆ ನಂತರದಲ್ಲಿ ಪೋಷಕ ಪಾತ್ರಗಳ ಮೂಲಕ ಮತ್ತಷ್ಟು ಆಪ್ತವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಣ್ಣದ ಬದುಕಿನ ತುಂಬಾ ಥರ ಥರದ ಪಾತ್ರಗಳ ಚಿತ್ತಾರವಿದೆ. ಅದರಲ್ಲಿ ಮತ್ತೊಂದು ಮಹತ್ವದ ಚಿತ್ರವಾಗಿ ಸಿಂಗ ದಾಖಲಾಗೋ ಎಲ್ಲ ಲಕ್ಷಣಗಳೂ ಇವೆ. ಸಿಂಗ ಚಿತ್ರದಲ್ಲಿ ತಾರಾ ನಟಿಸಿರೋ ಪಾತ್ರವೇ ಅಂಥಾದ್ದಿದೆ.

ಈ ಪಾತ್ರವನ್ನು ವಿಜಯ್ ಕಿರಣ್ ವಿವರಿಸಿದಾಗಲೇ ತಾರಾ ಖುಷಿಗೊಂಡಿದ್ದರಂತೆ. ಆ ನಂತರದಲ್ಲಿ ಆ ಪಾತ್ರವನ್ನು ಆವಾಹಿಸಿಕೊಳ್ಳೋದರ ಜೊತೆಗೇ ಚಿತ್ರೀಕರಣದ ಹಂತದಲ್ಲಿ ಸದಾ ಜೊತೆಯಾಗಿದ್ದ, ಚರ್ಚೆ ನಡೆಸಿ, ಸಲಹೆಗಳನ್ನೂ ನೀಡುತ್ತಾ ಚಿತ್ರತಂಡದಲ್ಲೊಂದು ಬೆರಗನ್ನು ತಾರಾ ಮೂಡಿಸಿದ್ದರಂತೆ. ಖುದ್ದು ಅವರಿಗೇ ಈ ಸಿನಿಮಾ ಸೂಪರ್ ಸಕ್ಸಸ್ ಕಾಣುತ್ತದೆ ಎಂಬ ಭರವಸೆಯಿದೆ. ಈವರೆಗೂ ಅದೆಷ್ಟೋ ಹಿಟ್ ಚಿತ್ರಗಳ ಭಾಗವಾಗಿರುವವರು ತಾರಾ. ಅಂಥವರೇ ಮೆಚ್ಚಿಕೊಂಡಾದ ಮೇಲೆ ಸಿಂಗ ತೀರಾ ಸ್ಪೆಷಲ್ ಆಗಿರೋ ಚಿತ್ರ ಅನ್ನೋದರಲ್ಲಿ ಯಾವ ಸಂಶಯವೂ ಉಳಿದಿಲ್ಲ.

Leave a Reply

Your email address will not be published. Required fields are marked *