Crime
ಹಾಡಹಗಲೇ ಯುವಕನ ಶಿರಚ್ಛೇದನ ಮಾಡಿ ಅರ್ಧ ಕಿ.ಮೀ ಮೆರವಣಿಗೆ ಮಾಡಿದ್ರು!

– ಚರ್ಚ್ ಮುಂಭಾಗಕ್ಕೆ ತಲೆ ಎಸೆದ ಗ್ಯಾಂಗ್
ಮಧುರೈ: ಹಾಡಹಗಲೇ ನಡುಬೀದಿಯಲ್ಲಿ ಸಾರ್ವಜನಿಕರ ಮುಂದೆ ಗ್ಯಾಂಗ್ ಒಂದು 22 ವರ್ಷದ ಯುವಕನ ಶಿರಚ್ಛೇದನ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
ಈ ಭಯಾಂಕರ ದೃಶ್ಯವನ್ನು ದಾರಿಹೋಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದ್ದಿದ್ದು, ಈ ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ನಗರದ ಸೆಂಟ್ ಮೇರಿ ಚರ್ಚ್ ಬಳಿ ಯುವಕನ ಶಿರಚ್ಛೇದನ ಮಾಡಿದ್ದಾರೆ. ನಂತರ ಆತನ ಶಿರವನ್ನು ಅರ್ಧ ಕಿಲೋ ಮೀಟರ್ ವರೆಗೂ ಮೆರವಣಿಗೆ ನಡೆಸಿ ಬಳಿಕ ಚರ್ಚಿನಿಂದ ಮುಂದಕ್ಕೆ ತಲೆಯನ್ನು ಎಸೆದಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಮೃತಪಟ್ಟ ವ್ಯಕ್ತಿ ಮುರುಗನಾಥಂ ಎಂಬಾತನಾಗಿದ್ದು, ಈತ ಸೊಲಾಯಪ್ಪನ್ ನಗರದ ನಿವಾಸಿ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದೀಗ ಯುವಕನ ದೇಹವನ್ನು ಮರಣೋತ್ತರ ಪರಿಕ್ಷೆಗೆ ಕಳುಹಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಧುರೈ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರ ಬಳಸುತ್ತಿದ್ದ ಕಾರನ್ನು ಸಹ ವಶ ಪಡಿಸಿಕೊಂಡಿದ್ದಾರೆ. ಕ್ರೂರ ಹತ್ಯೆಯ ಹಿಂದಿನ ಕಾರಣ ವೈಯಕ್ತಿಕ ದ್ವೇಷ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
