Connect with us

ಮದ್ಯ ನಿಷೇಧ, ಅಂತರ್ಜಾತಿ ವಿವಾಹ ಪ್ರೋತ್ಸಾಹಕ್ಕೆ ಕಾನೂನು- ತಮಿಳುನಾಡು ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ

ಮದ್ಯ ನಿಷೇಧ, ಅಂತರ್ಜಾತಿ ವಿವಾಹ ಪ್ರೋತ್ಸಾಹಕ್ಕೆ ಕಾನೂನು- ತಮಿಳುನಾಡು ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ

ಚೆನ್ನೈ: ತಮಿಳುನಾಡಿನಲ್ಲಿ ಚುನಾವಣೆ ರಂಗೇರಿದ್ದು, ಇಂದು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮದ್ಯದ ಅಂಗಡಿಗಳನ್ನು ಬಂದ್ ಮಾಡುವುದು, ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ಕಾನೂನು ರೂಪಿಸುವುದು ಸೇರಿದಂತೆ ವಿವಿಧ ಹೊಸ ಅಂಶಗಳನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇಂದು ಚೆನ್ನೈನ ಪಕ್ಷದ ಕಚೇರಿಯಲ್ಲಿ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ಅಳಗಿರಿ ಅವರು ಹಲವು ಅಂಶಗಳನ್ನು ಘೋಷಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮದ್ಯದಂಗಡಿಗಳನ್ನು ಮುಚ್ಚುತ್ತೇವೆ, ಅಂತರ್ಜಾತಿ ವಿವಾಹಗಳ ಹೆಚ್ಚಳಕ್ಕೆ ಕಾನೂನು ರೂಪಿಸುತ್ತೇವೆ. ಸ್ಟಾರ್ಟ್‍ಅಪ್ ಗಳಿಗೆ 5 ವರ್ಷಗಳ ವರೆಗೆ ತೆರಿಗೆ ವಿನಾಯಿತಿ ನೀಡುತ್ತೇವೆ. ಅಲ್ಲದೆ ಸರ್ಕಾರಿ ಕೆಲಸಕ್ಕಾಗಿ ಪ್ರತಿ ಜಿಲ್ಲೆಯಿಂದ 500 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತೇವೆ ಎಂದು ಪ್ರಣಾಳಿಕೆ ಮೂಲಕ ಭರವಸೆ ನೀಡಿದ್ದಾರೆ.

ಮರ್ಯಾದಾ ಹತ್ಯೆ ತಡೆಗೆ ಪ್ರತ್ಯೇಕ ಕಾನೂನು ರೂಪಿಸುತ್ತೇವೆ. ಅಲ್ಲದೆ ನೀಟ್ ಪರೀಕ್ಷೆ ತೆಗೆದುಹಾಕಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದು ಅಳಗಿರಿಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಡಿಎಂಕೆ ಕಳೆದ ವಾರ 6 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ಡಾಟಾ ಕಾರ್ಡ್ ಜೊತೆಗೆ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್, ಟ್ಯಾಬ್ಲೆಟ್ ನೀಡುತ್ತೇವೆ. ಅಲ್ಲದೆ ಸ್ಥಳೀಯರಿಗೆ ಶೇ.75ರಷ್ಟು ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿತ್ತು.

ತಮಿಳುನಾಡಿನಲ್ಲಿ ನೇರ ಹಣಾಹಣಿ ಏರ್ಪಟ್ಟಿದ್ದು, ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಹಾಗೂ ಮಾಜಿ ಸಿಎಂ ಎಂ.ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ನಡುವೆ ಫೈಟ್ ನಡೆಯುತ್ತಿದೆ. ದಿ.ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆ 2016ರಲ್ಲಿ ಸತತವಾಗಿ ಅಧಿಕಾರದ ಗದ್ದುಗೆ ಹಿಡಿಯಿತು. 1980ರಿಂದ ತಮಿಳುನಾಡಿನಲ್ಲಿ ಯಾವಾಗಲೂ ಆಡಳಿತ ಪಕ್ಷದ ವಿರುದ್ಧ ಮತ ಚಲಾಯಿಸಲಾಗುತ್ತಿತ್ತು. ಆದರೆ ಜಯಲಲಿತಾ ಅವರು ಈ ರೆಕಾರ್ಡ್ ಬ್ರೇಕ್ ಮಾಡಿ ಸತತವಾಗಿ ಅಧಿಕಾರದ ಗದ್ದುಗೆ ಏರಿದ್ದರು.

Advertisement
Advertisement
Advertisement