Wednesday, 11th December 2019

Recent News

ನೀರಿನ ಕೊರತೆಯಿಂದ ಶಾಲೆಗಳಿಗೆ ಬೀಗ ಹಾಕಿಲ್ಲ: ತಮಿಳುನಾಡಿನ ಸಿಎಂ

ಚೆನ್ನೈ: ತಮಿಳುನಾಡಿನಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಶಾಲೆ ಹಾಗೂ ಅತಿಥಿ ಗೃಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ ಎಂದು ಹೇಳಲಾಗಿತ್ತು. ಆದರೆ ಸಿಎಂ ಎಡಪ್ಪಾಡಿ ಕೆ.ಪಳಿನಿಸ್ವಾಮಿ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀರಿನ ಕೊರತೆಯಿಂದ ಶಾಲೆ ಹಾಗೂ ಅತಿಥಿ ಗೃಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ ಎನ್ನುವ ವರದಿ ಸುಳ್ಳು. ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹೆಚ್ಚಿನ ನೀರು ಸಂಗ್ರಹಿಸುವ ಉದ್ದೇಶದಿಂದ ಮಲ್ಲಪೇರಿಯಾ ಅಣೆಕಟ್ಟು ಸಾಮಥ್ರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಕೆಲಸ ಮಾಡುತ್ತಿದೆ. ಆದರೆ ಕೇರಳ ಸರ್ಕಾರವು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮನವೊಲಿಸುವ ಯತ್ನ ನಡೆಸಿದ್ದೇವೆ ಎಂದು ಎಡಪ್ಪಾಡಿ ಕೆ.ಪಳಿನಿಸ್ವಾಮಿ ತಿಳಿಸಿದ್ದಾರೆ.

ನಮ್ಮ ರಾಜ್ಯಕ್ಕೆ ನೀರುವ ಪೂರೈಕೆ ಮಾಡುತ್ತಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಧನ್ಯವಾದಗಳು. ಅವರಿಗೆ ಶೀಘ್ರವೇ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ನೀರಿನ ಸಮಸ್ಯೆಯಿಂದಾಗಿ ಚೆನ್ನೈನ ಓಲ್ಡ್ ಮಹಾಬಲಿಪುರಂ (ಓಎಂಆರ್) ಇಲಾಖೆಯ ಎಲ್ಲ ಐಟಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಕಳೆದ ವಾರ ಆದೇಶಿಸಿದ್ದವು.

ಕಚೇರಿಗಳಲ್ಲಿ ಸಮರ್ಪಕ ನೀರಿನ ಸೌಲಭ್ಯ ಒದಗಿಸಲಾಗದ ಹಿನ್ನೆಲೆಯಲ್ಲಿ ಓಎಂಆರ್ ವ್ಯಾಪ್ತಿಯ ಬಹುತೇಕ ಕಂಪನಿಗಳು ಈ ನಿರ್ಧಾರಕ್ಕೆ ಬಂದಿದ್ದವು. ಕಳೆದ 200 ದಿನಗಳಿಂದ ತಮಿಳುನಾಡಿನಲ್ಲಿ ಮಳೆಯಾಗಿಲ್ಲ. ಹಾಗಾಗಿ ಮುಂದಿನ 100 ದಿನಗಳ ಕಾಲ ಮನೆಯಿಂದಲೇ ಎಲ್ಲ ಉದ್ಯೋಗಿಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿತ್ತು.

ಓಎಂಆರ್ ವ್ಯಾಪ್ತಿಯಲ್ಲಿ ಸುಮಾರು 600 ಐಟಿ ಮತ್ತು ಐಟಿಎಸ್ ಫಾರ್ಮ್ ಗಳಿವೆ. ಇಲ್ಲಿಯ ಬಹುತೇಕ ಎಲ್ಲ ಕಂಪನಿಗಳು ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಶೊಲಿಂಗನಲ್ಲೂರು ವ್ಯಾಪ್ತಿಯ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ನೀರು ತರಲು ಸೂಚಿಸಿತ್ತು.

ಈ ಬಾರಿಯ ಬರಗಾಲ ಐಟಿ ಪಾರ್ಕ್ ನಲ್ಲಿರುವ ಕಂಪನಿಗಳ ಮೇಲೆ ಪ್ರಭಾವ ಬೀರಿದೆ. ಐಟಿ ಪಾರ್ಕ್ ನಲ್ಲಿಯ 46 ಕಂಪನಿಗಳಿಗೆ ಪ್ರತಿದಿನ ಸುಮಾರು 20 ಲಕ್ಷ ಲೀ. ನೀರಿನ ಅವಶ್ಯಕತೆ ಇದೆ. ಪಾರ್ಕ್ ನಲ್ಲಿಯ 17 ಕೊಳವೆ ಬಾವಿಗಳಿಂದ ನೀರು ತೆಗೆಯಲಾಗುತ್ತಿತ್ತು. ಕಳೆದ 200 ದಿನಗಳಿಂದ ಮಳೆಯಾಗದ ಹಿನ್ನೆಲೆಯಲ್ಲಿ ಕೇವಲ 10 ಲಕ್ಷ ಲೀಟರ್ ನೀರು ಸಿಗುತ್ತಿದೆ. ಉಳಿದ ನೀರನ್ನು ಟ್ಯಾಂಕರ್ ಮೂಲಕ ಹಾಕಿಸಿಕೊಳ್ಳಲಾಗುತ್ತಿದೆ. ಕೆಲ ಕಂಪನಿಗಳು ಕಟ್ಟಡದ ಗೋಡೆಯ ಮೇಲೆ ನೀರು ಉಳಿಸಿ ಜಾಗೃತಿಯ ಅಭಿಯಾನವನ್ನು ಸಹ ಕೈಗೊಂಡಿವೆ.

ತಮಿಳಿನ `ಗೂರ್ಖಾ’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನೀರಿನ ಮಹತ್ವದ ಬಗ್ಗೆ ಹಾಗೂ ನೀರನ್ನು ಮಿತವಾಗಿ ಬಳಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ದೇಶದಲ್ಲಿ ಹಲವೆಡೆ ಸರಿಯಾದ ಮಳೆಯಿಲ್ಲದೆ ಜನರು ಬರದಿಂದ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಚಿನ್ನ, ಪ್ಲಾಟಿನಂಗಳಿಗಿಂತ ನೀರು ಅಮೂಲ್ಯವಾದದ್ದು, ಅದನ್ನು ಮಿತವಾಗಿ ಬಳಸಿ, ಉಳಿಸಿ. ಜೀವಿಸಲು ನೀರು ಬೇಕು. ನೀರಿಗೆ ನಾವು ಬೆಲೆಕಟ್ಟಲು ಸಾಧ್ಯವಿಲ್ಲ. ಚೆನ್ನೈನಂತಹ ಮಹಾನಗರಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ದೇಶದ ಹಲವೆಡೆ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ ಎಂದಿದ್ದರು.

ಮನೆಯಲ್ಲಿ ಇಂದು ನಾನು ಅರ್ಧ ಬಕೆಟ್ ನೀರಿಗಾಗಿ ಅರ್ಧ ಗಂಟೆ ಕಾಯುವಂತಾಯಿತು. ಕೊನೆಗೆ ಸ್ನಾನಕ್ಕೆ ನೀರಿಲ್ಲದಂತಾಯಿತು ಎಂದು ತಾವು ನೀರಿಗಾಗಿ ಎದುರಿಸಿದ ಪರಿಸ್ಥಿತಿಯನ್ನು ಎಸ್‍ಪಿಬಿ ಹಂಚಿಕೊಂಡಿದ್ದರು.

ಇಂದು ಹನಿ ನೀರಿಗಾಗಿ ಅದೆಷ್ಟೋ ಜನರು ಪರದಾಡುತ್ತಿದ್ದಾರೆ. ಇಂದು ನೀರಿನ ಸಮಸ್ಯೆ ಕಾಡುತ್ತಿರುವುದಕ್ಕೆ ನಾವುಗಳೇ ಕಾರಣ. ನೀರನ್ನು ಸುಮ್ಮನೆ ಪೋಲು ಮಾಡುವುದನ್ನು ಬಿಡಿ. ನೀರನ್ನು ಉಳಿಸಲು ಕೆಲವು ಸರಳ ವಿಧಾನಗಳು ನಮ್ಮೆಲ್ಲರಿಗೂ ಗೊತ್ತಿರುತ್ತದೆ. ಆದರೆ ನಾವು ಅದನ್ನು ಪಾಲಿಸುವುದಿಲ್ಲ. ಪ್ರತಿದಿನ ನಾನಾ ರೀತಿಯ ಬಟ್ಟೆಗಳನ್ನು ಧರಿಸುವುದನ್ನು ಬಿಟ್ಟು, ವಾರಕ್ಕೆ ಕೇವಲ ಎರಡು ಜೊತೆ ಬಟ್ಟೆ ಧರಿಸಿ. ಇದರಿಂದ ಬಟ್ಟೆ ತೊಳೆಯಲು ಖರ್ಚಾಗುವ ಅನಗತ್ಯ ನೀರು ಉಳಿಯುತ್ತದೆ. ನೀರನ್ನು ಮಿತವಾಗಿ ಬಳಿಸಿ ಎಂದು ಕಳವಳ ವ್ಯಕ್ತಪಡಿಸಿದ್ದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Leave a Reply

Your email address will not be published. Required fields are marked *