Saturday, 20th July 2019

ಯಶ್ ಮಾಡಿದ್ದ ಸಹಾಯಕ್ಕೆ ಕೆಜಿಎಫ್ ಬೆನ್ನಿಗೆ ನಿಂತ ನಟ ವಿಶಾಲ್!

ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ರಾಂಕಿಂಗ್ ಸ್ಟಾರ್ ಯಶ್ ಸಹಾಯದ ಋಣವನ್ನು ಕಾಲಿವುಡ್ ನಟ ವಿಶಾಲ್ ‘ಕೆಜಿಎಫ್’ ಚಿತ್ರದ ಮೂಲಕ ತೀರಿಸುತ್ತಿದ್ದಾರೆ.

2015ರಲ್ಲಿ ಜಲಪ್ರಳಯ ಸಂಭವಿಸಿದ ಪರಿಣಾಮ ಮಹಾನಗರಿ ಚೆನ್ನೈ ನೀರಿನಲ್ಲಿ ಮುಳುಗಿಹೋಗಿತ್ತು. ಆಗ ಜನರಿಗೆ ತಿನ್ನಲು ಆಹಾರವಿಲ್ಲದೇ, ಧರಿಸಲು ಬಟ್ಟೆಯಿಲ್ಲದೇ ಬೀದಿಗೆ ಬಂದಿದ್ದರು. ಇಂತಹ ಸಂದರ್ಭದಲ್ಲಿ ಯಶ್ ಚೆನ್ನೈ ಜನತೆಯ ಸಹಾಯಕ್ಕೆ ನಿಂತಿದ್ದರು. ಚೆನ್ನೈನಲ್ಲಿ ಪ್ರಳಯವಾದಾಗ ಜನರಿಗೆ ಸಹಾಯ ಬೇಕು ಎಂದು ಕೇಳಿದ್ದೆ. ಆಗ ನಟ ಯಶ್ ಒಂದು ಟ್ರಕ್ ಕಳುಹಿಸಿದ್ದರು. ಅದು ಕರ್ನಾಟಕದಿಂದ ಬಂದ ಮೊದಲ ಟ್ರಕ್ ಆಗಿತ್ತು. ನಾನು ಫೋನ್ ಮಾಡಿದ 12 ಗಂಟೆಗಳಲ್ಲಿ ಅಲ್ಲಿಂದ ಟ್ರಕ್ ಬಂದಿದ್ದು, ಅದನ್ನ ನಾವು ಚೆನ್ನೈನ ಹಲವು ಭಾಗಗಳಲ್ಲಿ ಹಂಚಿದೆವು ಎಂದು ವಿಶಾಲ್ ಹೇಳಿದ್ದಾರೆ.

ಯಶ್ ಅವರು ಅಂದು ಮಾಡಿದ ಸಹಾಯವನ್ನು ನಾನು ಇವತ್ತಿಗೂ ಮರೆತಿಲ್ಲ. ಆದ್ದರಿಂದ ಅವರ ಋಣವನ್ನು ತೀರಿಸಬೇಕು ಎಂದುಕೊಂಡಿದ್ದೆ. ಆ ಅವಕಾಶ ಈಗ ಬಂದಿದ್ದು, ‘ಕೆಜಿಎಫ್’ ಸಿನಿಮಾವನ್ನು ನಾವು ಬಿಡುಗಡೆ ಮಾಡಿ ಯಶಸ್ಸು ನೀಡಬೇಕು ಅಂತ ತೀರ್ಮಾನಿಸಿದೆ ಎಂದು ನಟ ವಿಶಾಲ್ ಅವರು ಯಶ್ ಮಾಡಿದ್ದ ಸಹಾಯವನ್ನು ಹಂಚಿಕೊಂಡಿದ್ದಾರೆ.

ನಟ ಯಶ್ ಮತ್ತು ವಿಶಾಲ್ ಅನೇಕ ವರ್ಷಗಳಿಂದ ಸ್ನೇಹಿತರಾಗಿದ್ದು, ಸಿನಿಮಾ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೇ ಹೊರಗಡೆಯೂ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. ನಾನು ಹಣಕ್ಕಾಗಿ ‘ಕೆಜಿಎಫ್’ ಸಿನಿಮಾವನ್ನು ತಮಿಳಿನಲ್ಲಿ ವಿತರಣೆ ಮಾಡುತ್ತಿಲ್ಲ. ನನ್ನ ಸ್ನೇಹಿತ ಹಾಗೂ ಅವರು ನಮಗಾಗಿ ಮಾಡಿದ್ದ ಸಹಾಯಕ್ಕಾಗಿ ಮಾಡುತ್ತಿದ್ದೇನೆ ಎಂದು ವಿಶಾಲ್ ಸಂತಸದಿಂದ ಯಶ್ ಅವರ ‘ಯಶೋಮಾರ್ಗ’ದ ಬಗ್ಗೆಯೂ ಮಾತನಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *