Connect with us

Bengaluru City

ತಮಿಳು ನಟ ಅಜಿತ್‍ಗೆ ಅಪಘಾತ- ಅಭಿಮಾನಿಗಳ ಪ್ರಾರ್ಥನೆ

Published

on

– ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ

ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ ಅವರಿಗೆ ಅಪಘಾತವಾಗಿದ್ದು, ಶೂಟಿಂಗ್ ವೇಳೆ ರೇಸ್ ಸೀನ್ ಶೂಟ್ ಮಾಡುತ್ತಿದ್ದಾಗ ಬೈಕ್ ಅಪಘಾತವಾಗಿದೆ. ಈ ಸುದ್ದಿ ಪಸರಿಸುತ್ತಿದ್ದಂತೆ ಅಭಿಮಾನಿಗಳಲ್ಲಿ ಬೇಸರ ಮೂಡಿದ್ದು, ಬೇಗ ಗುಣಮುಖವಾಗಲೆಂದು ಪ್ರಾರ್ಥಿಸುತ್ತಿದ್ದಾರೆ.

ನಟ ಅಜಿತ್ ಕುಮಾರ್ ಕಳೆದ ವರ್ಷ ‘ವಿಶ್ವಾಸಂ’ ಮತ್ತು ‘ನೇರ್ಕೊಂಡ ಪಾರವೈ’ ಹಿಟ್ ಸಿನಿಮಾಗಳನ್ನು ನೀಡಿದ್ದರು. ಅದೇ ರೀತಿ ಈ ವರ್ಷದ ಪ್ರಾಜೆಕ್ಟರ್‍ಗಳತ್ತ ಚಿತ್ತ ಹರಿಸಿದ್ದರು. ಸದ್ಯ ಹೊಸ ಸಿನಿಮಾದ ಶೂಟಿಂಗ್‍ನಲ್ಲಿ ನಿರತರಾಗಿದ್ದ ಅವರಿಗೆ ವಿಘ್ನ ಎದುರಾಗಿದೆ. ಬೈಕ್ ಅಪಘಾತ ಆಗಿರುವುದರಿಂದ ಕೆಲವು ದಿನಗಳ ಕಾಲ ಚಿತ್ರೀಕರಣಕ್ಕೆ ಗೈರಾಗಲಿದ್ದಾರೆ ಎನ್ನಲಾಗಿದೆ.

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಎಚ್.ವಿನೋದ್ ಆ್ಯಕ್ಷನ್-ಕಟ್ ಹೇಳುತ್ತಿರುವ ಹೊಸ ಸಿನಿಮಾದಲ್ಲಿ ಅಜಿತ್ ಬ್ಯುಸಿಯಾಗಿದ್ದಾರೆ. ಈ ಹಿಂದೆ ‘ನೇರ್ಕೊಂಡ ಪಾರವೈ’ ಚಿತ್ರದಲ್ಲಿ ಸಹ ಅಜಿತ್ ಮತ್ತು ವಿನೋದ್ ಜೊತೆಯಾಗಿ ಕೆಲಸ ಮಾಡಿದ್ದರು. ಇಬ್ಬರ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದ ಶೂಟಿಂಗ್ ವೇಳೆ ಅಪಘಾತ ಸಂಭವಿಸಿದೆ. ಚೆನ್ನೈನಲ್ಲಿ ನಡೆಯುತ್ತಿದ್ದ ಸಾಹಸ ಸನ್ನಿವೇಶದ ಚಿತ್ರೀಕರಣದ ಸಂದರ್ಭದಲ್ಲಿ ಅಜಿತ್ ಓಡಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಅಜಿತ್ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.

ಬೈಕ್ ಮೇಲಿಂದ ಬಿದ್ದ ನಂತರ ಅಜಿತ್ ಅವರಿಗೆ ಗಾಯಗಳಾಗಿದ್ದವು. ಆದರೂ ಕೆಲ ನಿಮಿಷಗಳ ಕಾಲ ಬ್ರೇಕ್ ಪಡೆದು ಮತ್ತೆ ಶೂಟಿಂಗ್‍ನಲ್ಲಿ ಪಾಲ್ಗೊಂಡರಂತೆ. ಆ ದಿನದ ಶೂಟಿಂಗ್ ಮುಗಿದ ಬಳಿಕವಷ್ಟೇ ಫ್ಯಾಮಿಲಿ ಡಾಕ್ಟರ್ ಬಳಿ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ತಿಳಿದ ಅಭಿಮಾನಿಗಳು ತೀವ್ರ ಬೇಸರಗೊಂಡಿದ್ದಾರೆ.

ದಕ್ಷಿಣ ಭಾರತದಲ್ಲಿ ನಟ ಅಜಿತ್‍ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಜಿತ್ ಬೇಗ ಗುಣಮುಖವಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೇ ಪ್ರಾರಂಭವಾಗಿದೆ. #GetWellSoonTHALA ಎಂಬ ಹ್ಯಾಷ್‍ಟ್ಯಾಗ್ ಮೂಲಕ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟ ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.