Tuesday, 25th February 2020

ಪಿಓಕೆ ಬಗ್ಗೆ ಮಾತ್ರ ಮಾತುಕತೆ: ಪಾಕಿಸ್ತಾನವನ್ನ ಕುಟುಕಿದ ರಾಜನಾಥ್ ಸಿಂಗ್

ನವದೆಹಲಿ: ಭಾರತ ಮತ್ತು ಪಾಕ್ ಮಧ್ಯೆ ಮಾತುಕತೆ ನಡೆಯುವುದಾದರೆ ಅದು ಕೇವಲ ಪಾಕ್ ಆಕ್ರಮಿತ ಕಾಶ್ಮೀರದ (ಪಿಓಕೆ) ಬಗ್ಗೆ ಮಾತ್ರ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನವನ್ನು ಕುಟುಕಿದ್ದಾರೆ.

ಹರ್ಯಾಣದ ಕಲ್ಕಾದಲ್ಲಿ ನಡೆದ ‘ಜನ ಆಶೀರ್ವಾದ ಯಾತ್ರೆ’ಯಲ್ಲಿ ಮಾತನಾಡಿದ ಅವರು, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದು ಜಮ್ಮು-ಕಾಶ್ಮೀರದ ಅಭಿವೃದ್ಧಿಗಾಗಿ. ಈ ನಿರ್ಧಾರ ತಪ್ಪು ಅಂತ ಪಾಕಿಸ್ತಾನವು ವಿಶ್ವಸಂಸ್ಥೆಗೆ ದೂರು ನೀಡಿದೆ. ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ಪಾಕಿಸ್ತಾನದೊಂದಿಗೆ ಭಾರತ ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನ್ಯೂಕ್ಲಿಯರ್ ಶಕ್ತಿ ‘ನೋ ಫಸ್ಟ್ ಯೂಸ್’ ನೀತಿ ಭವಿಷ್ಯದಲ್ಲಿ ಬದಲಾಗಬಹುದು: ರಾಜನಾಥ್ ಸಿಂಗ್

ಹರ್ಯಾಣದ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಯು ಜನ ಆಶೀರ್ವಾದ ಯಾತ್ರೆಯನ್ನು ಕೈಗೊಂಡಿದೆ. ಈ ಯಾತ್ರೆಯು ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಸೆಪ್ಟೆಂಬರ್ 8ರಂದು ರೊಹ್ಟಕ್‍ನಲ್ಲಿ ಮುಕ್ತಾಯವಾಗಲಿದೆ. ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಹರ್ಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಮತ್ತು ಸಂಪುಟ ಸಚಿವರು ಯಾತ್ರೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ನಮ್ಮ ನೆರೆರಾಷ್ಟ್ರದಂತವರು ಮತ್ಯಾರಿಗೂ ಸಿಗದಿರಲಿ: ಪಾಕ್ ವಿರುದ್ಧ ರಾಜನಾಥ್ ಸಿಂಗ್ ಕಿಡಿ

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತದ ಕ್ರಮವನ್ನು ವಿರೋಧಿಸಿ ಪಾಕಿಸ್ತಾನವು ವಿಶ್ವಸಂಸ್ಥೆ ಮೆಟ್ಟಿಲೇರಿತ್ತು. ಈ ವಿಚಾರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶುಕ್ರವಾರ ಗೌಪ್ಯ ಸಭೆ ನಡೆಸಲಾಗಿತ್ತು. ಈ ವೇಳೆ ದೂರು ಸಲ್ಲಿಸಿದ್ದ ಪಾಕಿಸ್ತಾನವು ಭಾರೀ ಮುಖಭಂಗ ಅನುಭವಿಸಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಸೈಯದ್ ಅಕ್ಬರುದ್ದೀನ್ ಅವರು, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರುವುದು ಭಾರತದ ಆಂತರಿಕ ವಿಷಯ. ಆ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಆದರೂ ಚೀನಾ ಈ ವಿಚಾರವನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತಾಪಿಸುತ್ತಿದೆ. ಚೀನಾ ಅಭಿಪ್ರಾಯವು ಜಾಗತಿಕ ಅಭಿಪ್ರಾಯವಲ್ಲ ಎಂದು ತಿಳಿಸಿದ್ದರು.

ಒಟ್ಟು 5 ಪ್ರಶ್ನೆಗಳಿಗೆ ಉತ್ತರಿಸಿದ ಅಕ್ಬರುದ್ದೀನ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಪಾಕ್ ಪತ್ರಕರ್ತರಿಗೆ ಶೇಕ್ ಹ್ಯಾಂಡ್ ಮಾಡಿ ವ್ಯಂಗ್ಯವಾಗಿ ಕುಟುಕಿದ ವಿಡಿಯೋಗೆ ಭಾರತೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *