Tuesday, 25th February 2020

Recent News

ಫೋನ್‍ನಲ್ಲಿ ಮಾತನಾಡುತ್ತಾ ಬೆಡ್ ಮೇಲಿದ್ದ ಜೋಡಿ ಹಾವಿನ ಮೇಲೆ ಕುಳಿತ ಮಹಿಳೆ ಸಾವು

ಲಕ್ನೋ: ಫೋನ್‍ನಲ್ಲಿ ಮಾತನಾಡುತ್ತಾ ಬೆಡ್ ಮೇಲಿದ್ದ ಜೋಡಿ ಹಾವುಗಳ ಮೇಲೆ ಕುಳಿತ ಮಹಿಳೆ ಸಾವನ್ನಪ್ಪಿರುವ ಭಯಾನಕ ಘಟನೆ ಗೋರಖ್‍ಪುರದ ರಿಯಾನವ್ ಗ್ರಾಮದಲ್ಲಿ ನಡೆದಿದೆ.

ಥೈಲ್ಯಾಂಡ್‍ನಲ್ಲಿ ಕೆಲಸ ಮಾಡುತ್ತಿರುವ ಜೈ ಸಿಂಗ್ ಯಾದವ್ ಅವರ ಪತ್ನಿ ಗೀತಾ ತನ್ನ ಪತಿಯೊಂದಿಗೆ ಫೋನ್‍ನಲ್ಲಿ ಮಾತನಾಡುತ್ತಿದ್ದರು. ಜೋಡಿ ಹಾವುಗಳು ಮನೆಯೊಳಗೆ ಪ್ರವೇಶಿಸಿ ತನ್ನ ಬೆಡ್ ರೂಂನ ಬೆಡ್ ಕವರ್ ಒಳಗಡೆ ಸೇರಿಕೊಂಡಿರುವುದನ್ನು ಅರಿಯದ ಗೀತಾ ತನ್ನ ಗಂಡನೊಂದಿಗೆ ಫೋನ್‍ನಲ್ಲಿ ಮಾತನಾಡುತ್ತಾ ತನ್ನ ರೂಂಗೆ ತೆರಳಿ ಬೆಡ್ ಮೇಲೆ ಕುಳಿತಿದ್ದಾರೆ.

ತಕ್ಷಣವೇ ಗೀತಾ ಅವರನ್ನು ಕಚ್ಚಿದೆ. ಹಾವು ಕಚ್ಚುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಗೀತಾ ಪ್ರಜ್ಞಾಹೀನರಾಗಿ ರೂಂನಲ್ಲಿ ಬಿದ್ದಿದ್ದಾರೆ.

ಮನೆಯಲ್ಲಿದ್ದ ಕುಟುಂಬದ ಸದಸ್ಯರು ತಕ್ಷಣವೇ ಗೀತಾರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ವೇಳೆ ಗೀತಾ ಸಾವನ್ನಪ್ಪಿದ್ದಾರೆ. ಕುಟುಂಬದ ಸದಸ್ಯರು ಹಾಗೂ ಪಕ್ಕದ ಮನೆಯವರು ಗೀತಾ ಅವರ ಬೆಡ್ ರೂಂಗೆ ತೆರಳಿ ಗಮನಿಸಿದಾಗ ಬೆಡ್ ಮೇಲೆ ಜೋಡಿ ಹಾವುಗಳು ಇರುವುದನ್ನು ನೋಡಿದ್ದಾರೆ. ಕೋಪಗೊಂಡ ಸ್ಥಳೀಯರು ಹಾವುಗಳನ್ನು ಹೊಡೆದು ಸಾಯಿಸಿದ್ದಾರೆ.

ಸಾಧಾರಣವಾಗಿ ಹಾವುಗಳು ಮಿಲನ ಕ್ರಿಯೆ ನಡೆಸುತ್ತಿದ್ದಾಗ ಮಾತ್ರ ಒಟ್ಟಾಗಿ ಕಾಣುತ್ತದೆ. ಮಿಲನ ಕ್ರಿಯೆ ನಡೆಸುತ್ತಿದ್ದಾಗ ಗೀತಾ ಕುಳಿತ್ತಿದ್ದರಿಂದ ಸಿಟ್ಟಿಗೆದ್ದು ಹಾವುಗಳು ಕಚ್ಚಿರಬಹುದು ಎಂದು ಪಶುವೈದ್ಯಕೀಯ ತಜ್ಞರು ಶಂಕಿಸಿದ್ದಾರೆ.

Leave a Reply

Your email address will not be published. Required fields are marked *