Connect with us

Latest

7 ವರ್ಷದ ಬಳಿಕ ವಿಕೆಟ್‌- ಕೈ ಮುಗಿದು ನಮಸ್ಕರಿಸಿದ ಶ್ರೀಶಾಂತ್‌

Published

on

ಮುಂಬೈ: 7 ವರ್ಷದ ಬಳಿಕ ಕ್ರಿಕೆಟ್‌ಗೆ ಮರಳಿದ ಬೌಲರ್‌ ಶ್ರೀಶಾಂತ್‌ ತಾನು ಆಡಿದ ಮೊದಲ ಪಂದ್ಯದಲ್ಲಿ ವಿಕೆಟ್‌ ಕಿತ್ತಿದ್ದಾರೆ. ಎದುರಾಳಿ ತಂಡದ ಆಟಗಾರನನ್ನು ಶ್ರೀಶಾಂತ್‌ ಬೌಲ್ಡ್‌ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸೈಯ್ಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌ ಟೂರ್ನಿಯಲ್ಲಿ ಪುದುಚೇರಿ ವಿರುದ್ಧದ ಪಂದ್ಯದಲ್ಲಿ ಕೇರಳ ಪರ ಆಡಿದ ಶ್ರೀಶಾಂತ್‌ 4 ಓವರ್‌ ಎಸೆದು 29 ರನ್‌ ನೀಡಿ 1 ವಿಕೆಟ್‌ ಪಡೆದಿದ್ದಾರೆ. ವಿಕೆಟ್‌ ಪಡೆದ ಶ್ರೀಶಾಂತ್‌ ಪಿಚ್‌ಗೆ ಕೈ ಮುಗಿದು ನಮಸ್ಕಾರ ಸಲ್ಲಿಸಿದ್ದಾರೆ.

ಮೊದಲು ಬ್ಯಾಟಿಂಗ್‌ ಮಾಡಿದ್ದ ಪುದುಚೇರಿ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 138 ರನ್‌ ಗಳಿಸಿತು. ಕೇರಳ 18.2 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಿ 6 ವಿಕೆಟ್‌ಗಳ ಜಯ ಸಾಧಿಸಿತು.

2013ರ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಶ್ರೀಶಾಂತ್ ಮೇಲೆ ಬಿಸಿಸಿಐ ವಿಧಿಸಿದ್ದ ನಿಷೇಧ ಸೆಪ್ಟೆಂಬರ್‌ಗೆ ಅಂತ್ಯವಾಗಿತ್ತು. ನಿಷೇಧ ಮುಗಿದ ಬಳಿಕ ಕೇರಳ ಪರ ಈಗ ಶ್ರೀಶಾಂತ್‌ ಆಡುತ್ತಿದ್ದಾರೆ.

ರಣಜಿ ಕ್ರಿಕೆಟ್ ಆವೃತ್ತಿಯಲ್ಲಿ ಶ್ರೀಶಾಂತ್ ಸ್ಥಿರ ಪ್ರದರ್ಶನ ನೀಡಿದರೆ ಟೀಂ ಇಂಡಿಯಾ ‘ಎ’ ತಂಡಕ್ಕೆ, ಆ ಬಳಿಕ ಭಾರತ ತಂಡಕ್ಕೆ ಆಡುವ ಅವಕಾಶ ಲಭಿಸಲಿದೆ. ಶ್ರೀಶಾಂತ್ ಕಳೆದ 7 ವರ್ಷಗಳಿಂದ ಕ್ರಿಕೆಟ್‍ನಿಂದಲೇ ದೂರ ಉಳಿದಿದ್ದು, 37 ವರ್ಷದ ಆಟಗಾರ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ.

ಈಗಾಗಲೇ ಟೀಂ ಇಂಡಿಯಾಗೆ ಆಯ್ಕೆಯಾಗಲು ತಂಡದಲ್ಲಿ ಆಟಗಾರರ ನಡುವೆ ಭಾರೀ ಪೈಪೋಟಿ ಇದೆ. ಆದರೆ ಶ್ರೀಶಾಂತ್ ಮಾತ್ರ 2023ರ ವಿಶ್ವಕಪ್ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಪರ 27 ಟೆಸ್ಟ್, 53 ಏಕದಿನ ಪಂದ್ಯ ಆಡಿರುವ ಶ್ರೀಶಾಂತ್ ಕ್ರಮವಾಗಿ 87, 75 ವಿಕೆಟ್ ಪಡೆದಿದ್ದು, 10 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಶ್ರೀಶಾಂತ್ ಸದಸ್ಯರಾಗಿದ್ದರು.

Click to comment

Leave a Reply

Your email address will not be published. Required fields are marked *

www.publictv.in