Tuesday, 25th February 2020

ಸೈರಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನುಷ್ಕಾ ಶೆಟ್ಟಿ

ಹೈದರಾಬಾದ್: ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿ ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಈಗ ನಿಜವಾಗಿದೆ. ಈ ಕುರಿತು ಸೈರಾ ಚಿತ್ರತಂಡವೇ ಸ್ಪಷ್ಟಪಡಿಸಿದೆ.

ಸೈರಾ ಪ್ರಚಾರ ಕಾರ್ಯದಲ್ಲಿರುವ ಚಿತ್ರತಂಡ ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಈ ಅಂಶವನ್ನು ರಿವೀಲ್ ಮಾಡಿದೆ. ಅನುಷ್ಕಾ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದಾರೆ ಎಂಬ ಸಂಗತಿಯನ್ನು ಬಿಚ್ಚಿಟ್ಟಿರುವ ಚಿತ್ರತಂಡ, 1857ರ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಣಿ ಲಕ್ಷ್ಮೀ ಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ಮಾಪಕ ರಾಮ್ ಚರಣ್ ಸ್ಪಷ್ಟಪಡಿಸಿದ್ದಾರೆ.

ಸಂದರ್ಶನದಲ್ಲಿ ನಿರ್ಮಾಪಕ ರಾಮ್ ಚರಣ್ ಹಾಗೂ ಚಿರಂಜೀವಿ ಅವರು ಭಾಗವಹಿಸಿದ್ದು, ಈ ವೇಳೆ ಅನುಷ್ಕಾ ಅವರು ಸಿನಿಮಾ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಪಾತ್ರದ ಶೂಟಿಂಗ್ ಕೂಡ ನಡೆದಿದೆ ಎಂಬ ಅಂಶವನ್ನು ತಿಳಿಸಿದ್ದಾರೆ. ಚಿತ್ರದ ಆರಂಭದಲ್ಲಿ ರಾಣಿ ಲಕ್ಷ್ಮೀ ಬಾಯಿ ಯುದ್ಧಭೂಮಿಯಲ್ಲಿ ಗಾಯಗೊಂಡ ಸೈನಿಕರಿಗೆ ಉಯಲವಾಡ ನರಸಿಂಹ ರೆಡ್ಡಿ ಅವರ ಸ್ಪೂರ್ತಿದಾಯಕ ಕಥೆಯನ್ನು ಹೇಳುವ ಮೂಲಕವೇ ಚಿತ್ರ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.

ಈಗಾಗಲೇ ಚಿತ್ರದಲ್ಲಿ ನಟಿಸುತ್ತಿರುವ ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ತಮನ್ನಾ, ಜಗಪತಿ ಬಾಬು, ನಯನತಾರಾ ಅವರು ಶೂಟಿಂಗ್‍ನಲ್ಲಿ ಭಾಗಿಯಾಗಿದ್ದಾರೆ. ಚಿರಂಜೀವಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾದ ಟೀಸರ್ ಬಿಡುಗಡೆ ಮಾಡಿತ್ತು. ಅಕ್ಟೋಬರ್ 2 ರಂದು ಸಿನಿಮಾ ತೆರೆಕಾಣುತ್ತಿದೆ.

Leave a Reply

Your email address will not be published. Required fields are marked *