Sunday, 18th August 2019

ಅಪಘಾತದಲ್ಲಿ ರಾಷ್ಟ್ರೀಯ ಈಜು ಪಟು ದುರ್ಮರಣ

ಚೆನ್ನೈ: ರಸ್ತೆ ಅಪಘಾತದಲ್ಲಿ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್‍ರೊಬ್ಬರು ಬೈಕಿನಿಂದ ಬಿದ್ದು ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಎಂ.ಬಿ.ಬಾಲಕೃಷ್ಣನ್ ಮೃತ ಈಜುಪಟು. ಇವರು ಅರುಂಬಕ್ಕಂನಿಂದ ಶೆಣೈನಗರದ ಜಯಲಕ್ಷ್ಮಿ ಕಾಲೋನಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬೈಕ್ ಹಿಂಬದಿಯಲ್ಲಿ ಬಾಲಕೃಷ್ಣನ ಗೆಳತಿ ಕುಳಿತಿದ್ದು, ಆಕೆ ಅಪಘಾತದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಬಾಲಕೃಷ್ಣ ಬೈಕಿನಲ್ಲಿ ಗೆಳತಿ ಕೂರಿಸಿಕೊಂಡು ಬರುತ್ತಿದ್ದು, ಮುಂದೆ ಹೋಗುತ್ತಿದ್ದ ಟ್ರಕ್ ಅನ್ನು ಹಿಂದಿಕ್ಕುವ ಭರದಲ್ಲಿ ವೇಗವಾಗಿ ಬಂದು ಟ್ರಕ್‍ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸದಲ್ಲಿ ಬೈಕ್ ನಿಯಂತ್ರಣ ತಪ್ಪಿ ನೇರವಾಗಿ ಟ್ರಕ್ ಚಕ್ರಕ್ಕೆ ಸಿಕ್ಕಿದೆ. ಪರಿಣಾಮ ಬಾಲಕೃಷ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತ ಬಾಲಕೃಷ್ಣ ವೈದ್ಯ ದಂಪತಿಯ ಪುತ್ರನಾಗಿದ್ದು, ಅವರು ಗಿಂಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಅಮೆರಿಕದಲ್ಲಿ ಎಂ.ಎಸ್ ಪೂರ್ಣಗೊಳಿಸಿ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಬಾಲಕೃಷ್ಣ ರಾಷ್ಟ್ರೀಯ ಚಾಂಪಿಯನ್ ಶಿಪ್‍ಗಳಲ್ಲಿ ಸಾಧನೆ ಮಾಡಿರುವ ಅನುಭವಿ ಈಜು ಪಟುವಾಗಿದ್ದರು. 2010 ಢಾಕಾದಲ್ಲಿ ನಡೆದ 11ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.

ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಬಾಲಕೃಷ್ಣನ ಮೃತ ದೇಹವನ್ನು ಕಿಲ್ಪಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಜೊತೆಗೆ ಟ್ರಕ್ ಚಾಲಕ ಸುಬ್ರಹ್ಮಣ್ಯನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *