Connect with us

Bellary

ನನ್ನನ್ನು ಚೋಟು ಅಂತಾನೇ ಕರೆಯುತ್ತಿದ್ದರು- ಸುಷ್ಮಾ ನಿಧನಕ್ಕೆ ಜನಾರ್ದನ ರೆಡ್ಡಿ ಬೇಸರ

Published

on

ಬೆಂಗಳೂರು: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದು ಮಾಜಿ ಸಚಿವ,  ಗಣಿಧಣಿ ಜನಾರ್ದನ ರೆಡ್ಡಿ ಕೂಡ ಸುಷ್ಮಾ ಅವರ ಜೊತೆಗಿದ್ದ ಬಾಂಧ್ಯವವನ್ನು ಮೆಲುಕು ಹಾಕಿಕೊಂಡು ಬೇಸರ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸುಷ್ಮಾ ಅವರು ನನ್ನನ್ನು ಚೋಟು ಅಂತಾನೇ ಕರೆಯುತ್ತಿದ್ದರು. ಶ್ರೀರಾಮುಲು ಹಾಗೂ ನನ್ನನ್ನು ಅವರು ತಮ್ಮ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಂಡಿದ್ದರು ಎಂದರು.

ಸುಷ್ಮಾ ಅವರು ಜನ್ಮ ಕೊಟ್ಟ ತಾಯಿಗೆ ಸಮಾನರಾಗಿದ್ದರು. ಹಿಂದಿನ ಜನ್ಮದ ಋಣಾನುಬಂಧವೋ ಗೊತ್ತಿಲ್ಲ, ಆದರೆ ಭಗವಂತ ಸುಷ್ಮಾ ಅವರನ್ನು ನಮಗೆ ತಾಯಿಗೆ ಸಮಾನವಾಗಿ ನೀಡಿದ್ದಾರೆ. ತಾಯಿ ತನ್ನ ಮಕ್ಕಳನ್ನು ಹೇಗೆ ಜೋಪಾನವಾಗಿ ನೋಡಿಕೊಳ್ಳುತ್ತಾಳೋ ಅದೇ ರೀತಿ ಅವರು ನಮ್ಮನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ರಾಜಕೀಯವಾಗಿ ಸುಷ್ಮಾ ಸ್ವರಾಜ್ ಬೆಳೆದು ಬಂದಿದ್ದು ಹೇಗೆ?

2011ರ ವೇಳೆ ನಾನು ಬಂಧನವಾಗುವ ಸಂದರ್ಭದಲ್ಲಿ 20 ದಿನಗಳ ಮುಂಚೆ ನನ್ನ ಜೊತೆ ಮಾತನಾಡಿದ್ದರು. ಆ ಬಳಿಕ ಅಂದರೆ 1999ರಿಂದ 2011 ಹೀಗೆ 13 ವರ್ಷ ಅವರು ಬಳ್ಳಾರಿಗೆ ನಿರಂತರವಾಗಿ ಬಂದಿದ್ದರು. ಅವರಲ್ಲಿರುವ ಮಾನವೀಯತೆ, ನೇರ ನಡೆ ನುಡಿಯಿಂದಾಗಿ ಅವರೊಬ್ಬ ರಾಜಕಾರಣಿ ಅಂತ ಹೇಳೋಕೆ ಆಗಲ್ಲ. ಮಾನೀಯತೆ ಅಂದರೆ ಅದು ಸುಷ್ಮಾ ಸ್ವರಾಜ್ ಅಂತಾನೇ ಹೇಳಬಹುದು. ಅವರಲ್ಲಿ ಯಾವುದೇ ಮೋಸ, ಸುಳ್ಳು, ಕುತಂತ್ರವಿರಲಿಲ್ಲ. ಒಟ್ಟಿನಲ್ಲಿ ಸುಷ್ಮಾ ಅವರು ದೇವರ ಸ್ಥಾನಕ್ಕೆ ತೂಗುವಂತಹ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು.

ಚುನಾವಣಾ ಪೂರ್ವದಲ್ಲಿ ಸ್ವದೇಶಿ- ವಿದೇಶಿ ಎಂದು ಸೋನಿಯಾ ಗಾಂಧಿ ವಿರುದ್ಧ ಹೋರಾಟ ಮಾಡಲು ಬಳ್ಳಾರಿಗೆ ಹೆಜ್ಜೆ ಇಟ್ಟರು. ಅದು ಶ್ರಾವಣ ಮಾಸದ ಸಂದರ್ಭವಾಗಿತ್ತು. ಈ ಸಮಯದಲ್ಲಿ ವರಮಹಾಲಕ್ಷ್ಮಿ ಆಚರಣೆ ಮಾಡಲಾಗುತ್ತಿದ್ದು, ಸುಷ್ಮಾ ಅವರು ಕೂಡ ಬಳ್ಳಾರಿಗೆ ಬಂದು ಆಚರಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಈ ಹಬ್ಬಕ್ಕೆ ಎರಡು ದಿನ ಇರುವಾಗಲೇ ಅವರು ನಮ್ಮಿಂದ ದೂರವಾಗಿರುವುದು ದುಃಖದ ಸಂಗತಿಯಾಗಿದೆ ಎಂದರು.

ಹಬ್ಬಕ್ಕೆ ಬರದಿದ್ದರೂ ವರಮಹಾಲಕ್ಷ್ಮಿ ಬಂದಾಗ ಅವರನ್ನು ನೆನಪು ಮಾಡಿಕೊಳ್ಳುವ ದಿನವಾಗಿತ್ತು. ಒಟ್ಟಿನಲ್ಲಿ ಕರ್ನಾಟಕದಲ್ಲಿ ಮಾಡುವ ವರಮಹಾಲಕ್ಷ್ಮಿ ಪೂಜೆಯ ವಿಶೇಷತೆಯನ್ನು ಇಡೀ ದೇಶಕ್ಕೆ ಸುಷ್ಮಾ ಅವರು ಸಾರಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಶ್ರೀರಾಮುಲುಗೆ ರೌಡಿಯಂತೆ ಇದ್ದೀಯಾ ಅಂದಿದ್ದರಂತೆ ಸುಷ್ಮಾ ಸ್ವರಾಜ್

ಅಪ್ಪಿಕೊಂಡು ಕಣ್ಣೀರು ಹಾಕಿದ್ದರು: ಚುನಾವಣೆಯಲ್ಲಿ ಅವರು ಸೋತ ನಂತರ ಅವರು ಹೆಲಿಕಾಪ್ಟರ್ ನಲ್ಲಿ ಹತ್ತಿ ಕುಳಿತಾಗ, ನಾನು ಶ್ರೀರಾಮುಲು ಅವರ ಬಳಿ ಹೋಗಿದ್ದೆವು. ಆವಾಗ ನನಗೆ 29 ವರ್ಷ, ರಾಮುಲುಗೆ 25 ವರ್ಷ ವಯಸ್ಸಾಗಿದ್ದು, ಒಬ್ಬಳು ತಾಯಿ ತನ್ನ ಮಕ್ಕಳನ್ನು ಬಿಟ್ಟೋದರೆ ಹೇಗೆ ಆ ಮಕ್ಕಳು ಕಣ್ಣೀರು ಹಾಕುತ್ತವೋ, ಹಾಗೆಯೇ ನಾವಿಬ್ಬರೂ ಸುಷ್ಮಾ ಸ್ವರಾಜ್ ಮುಂದೆ ಕಣ್ಣೀರು ಹಾಕಿದ್ದೆವು. ಆಗ ಅವರು ಹಾರಕ್ಕೆ ರೆಡಿಯಾಗಿದ್ದ ಹೆಲಿಕಾಪ್ಟರನ್ನು ನಿಲ್ಲಿಸಿಯೇ ಬಿಟ್ಟರು. ನಂತರ ಕೆಳಗಿಳಿದು ಬಂದು ನನ್ನ ಹಾಗೂ ಶ್ರೀರಾಮುಲು ಇಬ್ಬರನ್ನೂ ಅಪ್ಪಿಕೊಂಡು ಕಣ್ಣೀರು ಸುರಿಸಿದರು ಎಂದು ಅವರೊಂದಿಗಿದ್ದ ಬಾಂಧವ್ಯವನ್ನು ಮೆಲುಕು ಹಾಕಿಕೊಂಡರು.

ಅಲ್ಲದೆ, ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ್ದ ಸುಷ್ಮಾ ಅವರು, ನಾನು ರಾಜಕೀಯಕ್ಕಾಗಿ ಬಳ್ಳಾರಿಗೆ ಬಂದಿರಬಹುದು. ಆದರೆ, ಇಲ್ಲಿಯ ಜನರು ತೋರಿಸುವ ಪ್ರೀತಿ ಹಾಗೂ ಈ ಮಕ್ಕಳಿಗೋಸ್ಕರ ಪ್ರತಿ ವರಮಹಾಲಕ್ಷ್ಮಿ ಪೂಜೆಗೆ ಬಳ್ಳಾರಿಗೆ ಬರುವುದಾಗಿ ತಿಳಿಸಿದ್ದರು. ಅವರ ಮಾತಿನಂತೆ ಸತತವಾಗಿ 13 ವರ್ಷ ಬಳ್ಳಾರಿಗೆ ಬಂದರು ಎಂದು ನೆನಪು ಮಾಡಿಕೊಂಡರು.

ನಾನು ರಾಜಕೀಯಕ್ಕೆ ಬರುತ್ತೇನೆಂದು ಕನಸಲ್ಲೂ ನೆನಪಿಸಿಕೊಂಡಿಲ್ಲ. ಸಂಪೂರ್ಣ ವ್ಯಾಪಾರ, ವ್ಯವಹಾರಗಳಲ್ಲೇ ನಾನು ತೊಡಗಿಕೊಂಡಿದ್ದೆ. ಆತ್ಮೀಯ ಸ್ನೇಹಿತರಾಗಿದ್ದ ಶ್ರೀರಾಮುಲು ಬಳ್ಳಾರಿಯಲ್ಲಿ ಶಾಸಕರಾಗಿ ನಿಂತಿದ್ದರು. ನಾಮಪತ್ರ ಸಲ್ಲಿಸಿದ ಕೂಡಲೇ ಎಲ್ಲರೂ ಅಲ್ಲೇ ಇರಬೇಕು, ಸುಷ್ಮಾ ಸ್ವರಾಜ್ ಬರುತ್ತಿದ್ದಾರೆ ಎಂದು ಹೇಳಿದರು. ಹೀಗಾಗಿ ನಾನು ಕಚೇರಿಯಲ್ಲಿ ಕುಳಿತಿದ್ದೆ ರಾಮುಲು ಅವರು ನಾಮಪತ್ರ ಸಲ್ಲಿಸಲು ತೆರಳಿದ್ದರು.

ಈ ವೇಳೆ ಬಂದ ಸುಷ್ಮಾ ಸ್ವರಾಜ್ ಅವರು, ಜನಾರ್ದನ್, ನೀನು ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕು. ನೀನು ನನ್ನ ಜೊತೆ ಬಂದು ಚುನಾವಣೆ ಮಾಡಬೇಕು ಎಂದು ಹೇಳಿದ್ದರು. ಅಲ್ಲಿಂದ ನಾನು ರಾಜಕೀಯಕ್ಕೆ ಕಾಲಿಟ್ಟೆ. ತಾಯಿಯ ಪ್ರೀತಿ, ಮಮತೆಯಿಂದಾಗಿ ನಾನು ರಾಜಕೀಯವಾಗಿ ಮುಂದುವರಿದೆ. ಹೀಗಾಗಿ ಅವರ ಬಗ್ಗೆ ಎಷ್ಟು ಹೇಳಿದರೂ ಅದು ಕಡಿಮೆಯೇ ಎಂದರು.

ಅವರು ನನ್ನ ಯಾವತ್ತೂ ಚೋಟು ಅಂತಾನೇ ಕರೆಯುತ್ತಿದ್ದರು. ಶ್ರೀರಾಮುರನನು ಹೆಸರಿಟ್ಟೇ ಕರೆಯುತ್ತಿದ್ದರು. ನಾವು ಅವರನ್ನು ಅಮ್ಮಾ ಎಂದೇ ಕರೆಯುತ್ತಿದ್ದೆವು. 2011ರ ಆಗಸ್ಟ್ ನಲ್ಲಿ ಅವರನ್ನು ಭೇಟಿಯಾಗಿದ್ದೆ. ಇಂದು ಅವರು ಇಲ್ಲವಾಗಿದ್ದು, ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ. ಯಾಕಂದರೆ ಕರ್ನಾಟಕದಲ್ಲಿ ಅವರಿಂದಾಗಿಯೇ ಭಾರತೀಯ ಜನತಾ ಪಕ್ಷ ಬೆಳಕಿಗೆ ಬಂದಿದೆ ಎಂದರೆ ತಪ್ಪಾಗಲಾರದು ಎಂದರು.

ಇಡೀ ದೇಶದಲ್ಲೇ ಬಿಜೆಪಿ ಎಂದರೆ ಕಾಣಿಸುವ ನಾಲ್ಕೈದು ಮುಖಗಳಲ್ಲಿ ಸುಷ್ಮಾ ಸ್ವರಾಜ್ ಕೂಡ ಒಬ್ಬರು. ಯಾಕಂದರೆ ಅವರ ಮುಖದಲ್ಲಿ ಯಾವತ್ತೂ ಸಿಂಧೂರವಿರುತ್ತಿತ್ತು ಎಂದು ಸುಷ್ಮಾ ಅವರನ್ನು ನೆನಪು ಮಾಡಿಕೊಂಡು ಬೇಸರ ವ್ಯಕ್ತಪಡಿಸಿದರು.

https://www.youtube.com/watch?v=wYwOuJ5_NEM