Connect with us

Latest

ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್ ಇದ್ದಂತೆ – ಸುಶೀಲ್‍ಕುಮಾರ್ ಶಿಂಧೆ

Published

on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‍ನ ಕಟುವಾದ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಆರೋಪಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಯೋಜನೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ಮಹಾರಾಷ್ಟ್ರದ ಸೋಲ್ಲಾಪುರಕ್ಕೆ ಬುಧವಾರ ಭೇಟಿ ನೀಡಿದ್ದರು. ಈ ವೇಳೆ ಬರ ಸೇರಿದಂತೆ ವಿವಿಧ ವಿಚಾರಗಳನ್ನು ಪ್ರಸ್ತಾಪಿಸದೇ ಚುನಾವಣಾ ಭಾಷಣ ಮಾಡಿದ್ದಾರೆ ಎಂದು ಸುಶೀಲ್ ಕುಮಾರ್ ಶಿಂಧೆ ಕುಟುಕಿದ್ದಾರೆ.

ಬಿಜೆಪಿ ನಾಯಕರು, ಅದರಲ್ಲೂ ಪ್ರಧಾನಿ ಮೋದಿ ಅವರು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸದಂತೆ ಕ್ರಮಕೈಗೊಳ್ಳುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಕೆಲಸ ಅಲ್ಲವೇ? ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರಿಂದ ಹಲ್ಲೆ ಮಾಡಿಸಲಾಗಿದೆ ಎಂದು ದೂರಿದರು.

ಭಾರತದಲ್ಲಿರುವುದು ಪ್ರಜಾಪ್ರಭುತ್ವವೇ ಅಥವಾ ಸರ್ವಾಧಿಕಾರವೇ? ಅಡಾಲ್ಫ್ ಹಿಟ್ಲರ್ ಕೂಡ ಈ ರೀತಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನೀತಿ ಅನುಸರಿಸಿ ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಪ್ರಧಾನಿ ಮೋದಿ ಹಲ್ಲೆ ಮಾಡಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಪ್ರಧಾನಿ ಮೋದಿ ಯಾರ ಮಾತನ್ನಾದರೂ ಕೇಳಿದ್ದಾರಾ? ಇದು ಹಿಟ್ಲರ್‍ನ ಸರ್ವಾಧಿಕಾರ ಧೋರಣೆ ತೋರಿಸುತ್ತದೆ. ರಾತ್ರೋರಾತ್ರಿ ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರನ್ನು ಉಚ್ಛಾಟಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

ಸುಶೀಲ್ ಕುಮಾರ್ ಶಿಂಧೆ ಅವರ ವಿರುದ್ಧ ಕಿಡಿ ಕಾರಿದ ಮಹಾರಾಷ್ಟ್ರ ಬಿಜೆಪಿ ವಕ್ತಾರ ಕೇಶವ್ ಉಪಾಧ್ಯಾಯ ಅವರು, ಗಾಂಧಿ ಕುಟುಂಬದ ಪರ ನಿಂತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುವ ಹಕ್ಕು ಶಿಂಧೆ ಅವರಿಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv