Connect with us

Cinema

ರಿಯಾ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ಸೂಕ್ತ ಆಧಾರಗಳಿಲ್ಲ- ಮುಂಬೈ ಕೋರ್ಟ್

Published

on

– ಆಕೆ ತಪ್ಪಿತಸ್ಥಳಲ್ಲ ಎಂದು ಸಹ ಕೋರ್ಟ್ ಹೇಳುತ್ತಿಲ್ಲ

ಮುಂಬೈ: ನಟ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ಡ್ರಗ್ಸ್ ಪ್ರಕರಣದಲ್ಲಿ ಅವರ ಪ್ರೇಯಸಿ, ನಟಿ ರಿಯಾ ಚಕ್ರವರ್ತಿ ಭಾಗಿಯಾಗಿದ್ದಾರೆ ಎಂಬ ಕುರಿತು ಯಾವುದೇ ಸೂಕ್ತ ಆಧಾರ ಕಂಡುಬರುತ್ತಿಲ್ಲ ಎಂದು ಮುಂಬೈ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಶುಕ್ರವಾರವಷ್ಟೇ ರಿಯಾ ಚಕ್ರವರ್ತಿ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ಸೋಮವಾರ ನ್ಯಾಯಾಲಯ ವಿವರವಾದ ಆದೇಶ ಪ್ರತಿಯನ್ನು ನೀಡಿದೆ. ಈ ವೇಳೆ ಆರೋಪಿಯು ಈ ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥಳಲ್ಲ ಎಂಬುದನ್ನು ನಂಬಲು ಸಮಂಜಸವಾದ ಆಧಾರಗಳಿರುವುದನ್ನು ದಾಖಲಿಸಬೇಕಿದೆ. ಆದರೆ ನ್ಯಾಯಾಲಯವು ಈ ಪ್ರಕರಣವನ್ನು ಖುಲಾಸೆಗೊಳಿಸುವ ತೀರ್ಪನ್ನು ಉಚ್ಚರಿಸುತ್ತಿದೆ ಅಥವಾ ತಪ್ಪಿತಸ್ಥಳಲ್ಲ ಎಂದು ದಾಖಲಿಸುವಂತೆ ಪರಿಗಣಿಸುವ ಉದ್ದೇಶವನ್ನು ಹೊಂದಿಲ್ಲ ಎಂಬುದನ್ನು ಸಹ ನೆನಪಿನಲ್ಲಿಡಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ನೀಡಿರುವ ಕುರಿತು ರಿಯಾ ಚಕ್ರವರ್ತಿ, ಇವರ ಸಹೋದರ ಶೋವಿಕ್ ಹಾಗೂ ಇತರರನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಶೇಷ ನ್ಯಾಯಾಧೀಶರಾದ ಜಿ.ಬಿ.ಗುರವ್ ಅವರು ಶೋವಿಕ್ ಸೇರಿದಂತೆ ಇತರ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನು ಸಹ ವಜಾಗೊಳಿಸಿದೆ. ಇದನ್ನೂ ಓದಿ: ಜಾಮೀನು ಅರ್ಜಿ ವಜಾ – ರಿಯಾ ಚಕ್ರವರ್ತಿಗೆ ಜೈಲೇ ಗತಿ

ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಲಭ್ಯವಿರುವ ದಾಖಲೆಗಳನ್ನು ಗಮನಿಸಿದರೆ ಆರೋಪಿ ರಿಯಾ ಚಕ್ರವರ್ತಿಯವರನ್ನು ಪ್ರಕರಣಕ್ಕೆ ಕನೆಕ್ಟ್ ಮಾಡಲು ಸೂಕ್ತ ಆಧಾರಗಳಿಲ್ಲ. ಆದರೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶ ಮಾಡಬಹುದು ಎಂಬುದನ್ನು ಕೋರ್ಟ್ ಉಲ್ಲೇಖಿಸಿದೆ.

ಸದ್ಯ ರಿಯಾ ಚಕ್ರವರ್ತಿಯವರನ್ನು ಮುಂಬೈನ ಬೈಕುಲ್ಲಾ ಜೈಲ್‍ನಲ್ಲಿ ಇಡಲಾಗಿದೆ. ಕಳೆದ ವಾರವಷ್ಟೇ ಎನ್‍ಸಿಬಿ ಅಧಿಕಾರಿಗಳು ತನಿಖೆ ನಡೆಸಿ, 28 ವರ್ಷದ ರಿಯಾ ಚಕ್ರವರ್ತಿಯನ್ನು ವಿಚಾರಣೆ ಸಹ ನಡೆಸಿದ್ದಾರೆ. ಈ ವೇಳೆ ನಟಿ ಡ್ರಗ್ಸ್ ಸಂಗ್ರಹಿಸಿದ್ದು ಮಾತ್ರವಲ್ಲದೆ, ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಡ್ರಗ್ಸ್ ನೀಡಿದ್ದಾರೆ ಎಂದು ಎನ್‍ಸಿಬಿ ಆರೋಪಿಸಿದೆ.

ಸೆಪ್ಟೆಂಬರ್ 11ರಂದು ರಿಯಾ ಮತ್ತು ಆಕೆಯ ಸಹೋದರ ಶೌವಿಕ್ ಚಕ್ರವರ್ತಿ ಸೇರಿದಂತೆ ಇನ್ನು ಎಂಟು ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಈ ಮೂಲಕ ಮತ್ತೆ ಸೆಪ್ಟಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈಗ ಆಕೆ ಬಾಂಬೆ ಹೈಕೋರ್ಟಿಗೆ ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

ಜಾಮೀನು ಅರ್ಜಿಯಲ್ಲಿ ರಿಯಾ, ತನಿಖೆ ವೇಳೆ ಒಪ್ಪಿಕೊಂಡಿದ್ದನ್ನು ತಳ್ಳಿಹಾಕಿದ್ದು, ತನಿಖೆ ವೇಳೆ ನನ್ನನ್ನು ಹೆದರಿಸಿ ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಲಾಯಿತು ಎಂದು ತಿಳಿಸಿದ್ದಾರೆ. ಜೊತೆಗೆ ನಾನು ಏನೂ ತಪ್ಪು ಮಾಡಿಲ್ಲ. ಸುಮ್ಮನೆ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ. ಈ ವೇಳೆ ಹೊರಗಿನಿಂದ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ಈ ಸಂದರ್ಭದಲ್ಲಿ ತನಿಖೆ ಮಾಡುತ್ತಿರುವುದು ನನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಜಾಮೀನಿಗೆ ಅರ್ಜಿ ಹಾಕಿದ್ದರು.

ಈ ಅರ್ಜಿಯ ವಿರುದ್ಧ ವಾದ ಮಂಡಿಸಿದ್ದ ಎನ್‍ಸಿಬಿ ಪರ ವಕೀಲರು, ರಿಯಾ ತಾನು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೆ ಈಕೆಯನ್ನು ಹೊರಗೆ ಕಳುಹಿಸಿದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ. ಜೊತೆಗೆ ಈಕೆಗೆ ಇರುವ ಆರ್ಥಿಕ ಬಲದಿಂದ ಸಾಕ್ಷಿಗಳನ್ನು ಗೆಲ್ಲಬಹುದು. ಹೀಗಾಗಿ ತನಿಖೆ ಪೂರ್ತಿಯಾಗುವ ತನಕ ಆಕೆ ನ್ಯಾಯಾಂಗ ಬಂಧನದಲ್ಲಿರುವುದು ಸೂಕ್ತ ಎಂದು ವಾದ ಮಾಡಿದ್ದರು. ಇದನ್ನೂ ಓದಿ: ಫ್ಯಾನ್, ಬೆಡ್ ಇಲ್ಲ- ಇಂದ್ರಾಣಿ ಪಕ್ಕದಲ್ಲೇ ರಿಯಾ ಜೈಲುವಾಸ

ಆಕೆ ಸುಶಾಂತ್ ಸಿಂಗ್ ಅವರಿಗೆ ಡ್ರಗ್ ನೀಡುತ್ತಿದ್ದಳು ಎಂಬುದು ತನಿಖೆ ವೇಳೆ ದೃಢಪಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆಕೆ ತನ್ನ ಸಹೋದರ ಜೊತೆ ನಡೆಸಿರುವ ವಾಟ್ಸಪ್ ಚಾಟ್ ಕೂಡ ಲಭ್ಯವಾಗಿದೆ. ರಿಯಾ ಡ್ರಗ್ಸ್ ತೆಗೆದುಕೊಳ್ಳುವುದಕ್ಕೆ ಸುಶಾಂತ್ ಅವರ ಡೆಬಿಟ್ ಕಾರ್ಡ್ ಅನ್ನು ಉಪಯೋಗಿಸುತ್ತಿದ್ದದ್ದು ಕೂಡ ತನಿಖೆ ವೇಳೆ ಗೊತ್ತಾಗಿದೆ. ಹೀಗಾಗಿ ಆಕೆಗೆ ಜಾಮಿನು ನೀಡಬಾರದು ಎಂದು ಎನ್‍ಸಿಬಿ ವಾದ ಮಂಡಿಸಿತ್ತು.

ರಿಯಾ ಬಂಧನ ಬಳಿಕ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ನಟಿ ಪರ ವಕೀಲ ಸತೀಶ್ ಮನೋಶಿಂಧೆ, ಓರ್ವ ಡ್ರಗ್ಸ್ ಅಡಿಕ್ಟ್ ಸುಶಾಂತ್ ಸಿಂಗ್ ರಜಪೂತ್ ನನ್ನು ಪ್ರೀತಿ ಮಾಡಿದ ತಪ್ಪಿಗೆ ರಿಯಾ ಈ ಶಿಕ್ಷೆ ಅನುಭವಿಸುತ್ತಿದ್ದಾರೆ. ವಿಚಾರಣೆಗೆ ಸಹಕಾರ ನೀಡಿದರೂ ಕಕ್ಷಿದಾರರ ಬಂಧನವಾಗಿದೆ. ಭಾನುವಾರ, ಸೋಮವಾರ ಸಹ ರಿಯಾ ಅವರನ್ನ ವಿಚಾರಣೆ ನಡೆಸಲಾಗಿದೆ. ಒಬ್ಬ ಮಹಿಳೆ ಹಿಂದೆ ಮೂರು ತನಿಖಾ ಏಜೆನ್ಸಿಗಳು ಬೆನ್ನು ಬಿದ್ದಿವೆ ಎಂದು ಆರೋಪ ಮಾಡಿದ್ದರು. ಇದನ್ನೂ ಓದಿ: ಡ್ರಗ್ಸ್ ಅಡಿಕ್ಟ್ ಸುಶಾಂತ್‍ನನ್ನು ಪ್ರೀತಿಸಿದ್ದಕ್ಕೆ ಈ ಶಿಕ್ಷೆ: ರಿಯಾ ಪರ ವಕೀಲ

Click to comment

Leave a Reply

Your email address will not be published. Required fields are marked *