Connect with us

Cricket

ಸೂರ್ಯ ಕುಮಾರ್ ಯಾದವ್ ಭಾರತದ ಎಬಿಡಿ ವಿಲಿಯರ್ಸ್: ಹರ್ಭಜನ್ ಸಿಂಗ್

Published

on

ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ಸೂರ್ಯ ಕುಮಾರ್ ಯಾದವ್ ಭಾರತದ ಎಬಿಡಿ ವಿಲಿಯರ್ಸ್ ಎಂದು ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಐಪಿಎಲ್-2020 ಟ್ರೋಫಿಯನ್ನು ಮುಂಬೈ ಇಂಡಿಯನ್ಸ್ ತಂಡ ಗೆದ್ದುಕೊಂಡಿದೆ. ಮುಂಬೈ ಐದನೇ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಸೂರ್ಯಕುಮಾರ್ ಯಾದವ್ ಪ್ರಮುಖ ಪಾತ್ರ ವಹಿಸಿದ್ದರು. ಈಗ ಇವರ ಬ್ಯಾಟಿಂಗ್ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿದ ಹರ್ಭಜನ್ ಸಿಂಗ್, ಆತ ಭಾರತದ ಎಬಿಡಿ ವಿಲಿಯರ್ಸ್ ಎಂದು ಹಾಡಿಹೊಗಳಿದ್ದಾರೆ.

ಸೂರ್ಯ ಕುಮಾರ್ ಯಾದವ್ ಓರ್ವ ಗೇಮ್ ಚೇಂಜರ್ ಆಗಿ ಬದಲಾವಣೆಯಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಮ್ಯಾಚ್ ವಿನ್ನರ್ ಆಗಿದ್ದಾರೆ. ಅವರ ಬ್ಯಾಟಿಂಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಜೊತೆಗೆ ಅವರು ಮೊದಲ ಬಾಲಿನಿಂದಲೇ ಅಬ್ಬರಿಸಲು ಆರಂಭ ಮಾಡುತ್ತಾರೆ. ಮೊದಲ ಬಾಲ್ ನಲ್ಲೇ 100 ಸ್ಟ್ರೈಕ್ ರೇಟಿನಲ್ಲಿ ಬ್ಯಾಟ್ ಬೀಸುವ ಸಾಮರ್ಥ್ಯವನ್ನು ಸೂರ್ಯಕುಮಾರ್ ಹೊಂದಿದ್ದಾರೆ ಎಂದು ಭಜ್ಜಿ ತಿಳಿಸಿದ್ದಾರೆ.

ಮೈದಾನದಲ್ಲಿ ಸೂರ್ಯ ಎಲ್ಲ ಬಗೆಯ ಹೊಡೆತಗಳನ್ನು ಹೊಡೆಯುತ್ತಾರೆ. ಓವರ್ ಕವರ್, ಸ್ವಿಪ್ ಶಾಟ್‍ಗಳನ್ನು ಉತ್ತಮವಾಗಿ ಆಡುತ್ತಾರೆ. ಜೊತೆಗೆ ಸ್ಪಿನ್‍ಗೆ ಮತ್ತು ವೇಗದ ಬೌಲಿಂಗ್‍ಗೆ ಭರ್ಜರಿಯಾಗಿ ಬ್ಯಾಟ್ ಬೀಸುತ್ತಾರೆ. ಆತ ಒಂದು ರೀತಿಯ ಇಂಡಿಯಾದ ಎಬಿಡಿ ವಿಲಿಯರ್ಸ್. ಯಾದವ್ ಇಂಡಿಯಾ ಟೀಂಗೆ ಆಯ್ಕೆ ಆಗಬೇಕಿತ್ತು. ಒಳ್ಳೆಯ ಆಟಗಾರ ಟಿ-20 ಪಂದ್ಯದಲ್ಲಿ ಉತ್ತಮವಾಗಿ ಆಡಿ ಎಲ್ಲರ ಗಮನ ಸೆಳೆದಿದ್ದಾರೆ. ಮುಂದೆ ಪಕ್ಕ ಟೀಂ ಇಂಡಿಯಾಗೆ ಆಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ಯಾದವ್ ಓರ್ವ ಉತ್ತಮ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್‍ನಲ್ಲಿ 101 ಪಂದ್ಯಗಳನ್ನು ಆಡಿರುವ ಸೂರ್ಯ 11 ಅರ್ಧಶತಕದ ಸಹಾಯದಿಂದ 2,024 ರನ್ ಸಿಡಿಸಿದ್ದಾರೆ. ಐಪಿಎಲ್-2020ರಲ್ಲಿ ಮುಂಬೈ ಇಂಡಿಯನ್ಸ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಸೂರ್ಯ, 16 ಪಂದ್ಯಗಳಲ್ಲಿ 480 ರನ್ ಸಿಡಿಸಿ ಮಿಂಚಿದರು. ಜೊತೆಗೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗದ ಕಾರಣಕ್ಕೆ ವಿವಾದವನ್ನು ಮಾಡಿಕೊಂಡಿದ್ದರು.

Click to comment

Leave a Reply

Your email address will not be published. Required fields are marked *

www.publictv.in