Connect with us

Districts

ಸದ್ಯಕ್ಕೆ ರಾಜ್ಯದಲ್ಲಿ ಶಾಲೆಗಳನ್ನ ಆರಂಭ ಮಾಡ್ತಿಲ್ಲ – ಸುರೇಶ್ ಕುಮಾರ್ ಸ್ಪಷ್ಟನೆ

Published

on

– ಶೇ.100ಕ್ಕೆ ನೂರಷ್ಟು ಯಡಿಯೂರಪ್ಪ ಸಿಎಂ ಆಗಿರ್ತಾರೆ

ಮೈಸೂರು: ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡುತ್ತಿಲ್ಲ. ಈಗ ಪಠ್ಯದ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಅನುಮತಿ ಸಿಕ್ಕಿದೆ. ಅದು ಕಡ್ಡಾಯ ಅಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಸುರೇಶ್ ಕುಮಾರ್, ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡುತ್ತಿಲ್ಲ. ಈಗ ಅನುಮತಿ ಸಿಕ್ಕಿರುವುದು ಪಠ್ಯದ ಅನುಮಾನಗಳನ್ನು ಬಗೆಹರಿಸಿಕೊಳ್ಳಲು. ಅದು ಕಡ್ಡಾಯ ಅಲ್ಲ. ಇದಕ್ಕೂ ಪೋಷಕರ ಅನುಮತಿ ಕಡ್ಡಾಯ. ಸೆಪ್ಟೆಂಬರ್ 21 ರಿಂದ ಎಲ್ಲಾ ಶಿಕ್ಷಕರು ಶಾಲೆಗೆ ಬರಬೇಕು. ಸೆಪ್ಟೆಂಬರ್ 21 ರಿಂದ 9, 10, 11, 12ನೇ ತರಗತಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಬಗ್ಗೆ ಏನಾದರೂ ಅನುಮಾನ ಇದ್ದರೆ ಸ್ಪಷ್ಟೀಕರಣ ತೆಗೆದುಕೊಳ್ಳಬಹುದು. ಅದು ದೈನಂದಿನ ತಗರತಿ ರೀತಿ ಅಲ್ಲ. ಓದಿದ್ದು ಅರ್ಥವಾಗಿಲ್ಲ ಅಂದರೆ ಶಿಕ್ಷಕರ ಜೊತೆ ಮಾಹಿತಿ ಪಡೆದುಕೊಳ್ಳಬಹುದು ಎಂದರು.

ಶಾಲೆಯನ್ನು ಮತ್ತೆ ಆರಂಭಿಸಲು ಕೇಂದ್ರದ ಅನುಮತಿ ಬೇಕು. ಅನುಮತಿ ನೀಡಿದ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಕೇಂದ್ರ ಸರ್ಕಾರ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಶಾಲೆಗೆ ಬರಲು ವಿದ್ಯಾರ್ಥಿಗಳು ಉತ್ಸಾಹಕರಾಗಿದ್ದಾರೆ. ಆದರೆ ಪೋಷಕರಿಗೆ ಇನ್ನೂ ಆತಂಕವಿದೆ. ಹೀಗಾಗಿ ಪೋಷಕರಿಂದ ಕೂಡ ಒಂದು ಅನುಮತಿ ಪತ್ರವನ್ನು ತೆಗೆದುಕೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.

ಕೊರೊನಾದಿಂದ ಈ ವರ್ಷ ಹೆಚ್ಚಿನ ಶುಲ್ಕ ತೆಗೆದುಕೊಳ್ಳುಬಾರದೆಂದು ಆದೇಶ ಹೊರಡಿಸಿದ್ದೇವೆ. ಖಾಸಗಿಯವರು ಇದೇ ನೆಪದಲ್ಲಿ ಸಂಪೂರ್ಣ ಶುಲ್ಕ ತೆಗೆದುಕೊಳ್ಳಬಾರದು. ಒಂದು ಕಂತಿನ ಶುಲ್ಕ ತೆಗೆದುಕೊಳ್ಳಲು ಅನುಮತಿ ಇದೆ. ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ವರ್ಗಾವಣೆಗೆ ಖಾಸಗಿ ಶಾಲೆಯ ವರ್ಗಾವಣೆ ಪತ್ರ ಕಡ್ಡಾಯವಲ್ಲ. ಖಾಸಗಿ ಅವರ ವರ್ಗಾವಣೆ ಪತ್ರ ಕೊಡದಿದ್ದರೆ ಬಿಇಓ ಮೂಲಕವೇ ಪಡೆಯಬಹುದು ಎಂದು ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರು, ಅಂತಹ ಯಾವುದೇ ಸಾಧ್ಯತೆಗಳು ರಾಜ್ಯದಲ್ಲಿ ಇಲ್ಲ. ಶೇ.100ಕ್ಕೆ ನೂರಷ್ಟು ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ. ಇನ್ನೂ ಸಚಿವ ಸಂಪುಟ ವಿಸ್ತರಣೆ ವಿಚಾರ ಅದು ಸಿಎಂ ಪರಮಾಧಿಕಾರ. ಹೀಗಾಗಿ ಆ ಬಗ್ಗೆ ಸಿಎಂ ಯಡಿಯೂರಪ್ಪ ಅವರೇ ತೀರ್ಮಾನ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತಾರೆ ಎಂದು ಸುರೇಶ್ ಕುಮಾರ್ ಹೇಳಿದರು.

Click to comment

Leave a Reply

Your email address will not be published. Required fields are marked *