Thursday, 17th October 2019

ಮ್ಯಾಗಜಿನ್ ಫೋಟೋ ನೋಡಿ ‘ಅವಳಲ್ಲ ಅವನ’ ಮೇಲೆ ಕೈದಿಗಾಯ್ತು ಲವ್

ಗಾಂಧಿನಗರ: ಕೈದಿಯೋರ್ವನಿಗೆ ತೃತೀಯ ಲಿಂಗಿ ಮೇಲೆ ಲವ್ ಆಗಿದ್ದು, ತನ್ನೊಂದಿಗೆ ಬರುವಂತೆ ಆಕೆಗೆ ಜೈಲಿನಿಂದಲೇ ಕಿರುಕುಳ ನೀಡುತ್ತಿರುವ ಘಟನೆ ವಡೋದರದ ನವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೂರತ್ ಲಾಜಪೋರ್ ಜೈಲಿನಿಂದಲೇ ತೃತೀಯ ಲಿಂಗಿಗೆ ಕೈದಿ ಕಿರುಕುಳ ನೀಡಿದ್ದಾನೆ.

ಆರೋಪಿ ಶಾಕಿರ್ ಅಲಿಯಾಸ್ ದಾನಿಶ್ ವಶಿಅಹ್ಮದ್ ಗೆ ತೃತೀಯ ಲಿಂಗಿಯಾದ ಜೋಯಾ ಖಾನ್ ಮೇಲೆ ಲವ್ ಆಗಿತ್ತು. ಮಾಡೆಲ್ ಆಗಿರುವ ಜೋಯಾ ಫೋಟೋ ಸ್ಥಳೀಯ ಮ್ಯಾಗಜಿನ್ ನಲ್ಲಿ ಪ್ರಕಟವಾಗಿತ್ತು. 2018ರಲ್ಲಿ ಜೋಯಾಳನ್ನು ಪರಿಚಯಿಸಿಕೊಂಡ ಶಾಕಿರ್ ಮೊದಲಿಗೆ ಸ್ನೇಹ ಸಂಪಾದಿಸಿಕೊಂಡಿದ್ದಾನೆ. ಕೆಲವು ದಿನಗಳ ಬಳಿಕ ಶಾಕಿರ್ ತನ್ನ ಪ್ರೇಮವನ್ನು ಜೋಯಾ ಮುಂದೆ ಹೇಳಿಕೊಂಡಿದ್ದಾನೆ.

ತಾನು ತೃತೀಯ ಲಿಂಗಿಯಾಗಿದ್ದು, ನಮ್ಮಿಬ್ಬರ ನಡುವೆ ಪ್ರೀತಿ ಸಾಧ್ಯವಿಲ್ಲ ಎಂದು ಜೋಯಾ ಆತನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಾಳೆ. ಮೊದಲೇ ಜೈಲು ಪಾಲಾಗಿದ್ದ ಶಾಕಿರ್ ಫೋನ್ ಕರೆಯ ಮೂಲಕ ಬೆದರಿಕೆ ಹಾಕುತ್ತಿದ್ದಾನೆ. ಜೂನ್ 1 ರಿಂದ ಜುಲೈ 14ರವರೆಗೆ ಜೋಯಾಳಿಗೆ ಫೋನ್ ಮೂಲಕ ಬೆದರಿಕೆ ಹಾಕಿದ್ದಾನೆ. ಕೆಲವೇ ದಿನಗಳಲ್ಲಿ ಪೆರೋಲ್ ಮೇಲೆ ಹೊರ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಈ ಸಂಬಂಧ ಜೋಯಾ ಆರೋಪಿ ವಿರುದ್ಧ ನವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೊಬೈಲ್ ಕರೆಯನ್ನಾಧರಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *