Connect with us

Bengaluru City

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಸೂರಂ ರಾಮಯ್ಯ ಇನ್ನಿಲ್ಲ

Published

on

Share this

ಬೆಂಗಳೂರು: 102 ವರ್ಷಗಳ ಸಾರ್ಥಕ ಜೀವನ ನಡೆಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೂರಂ ರಾಮಯ್ಯನವರು ಇಂದು ನಿಧನರಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದ ನಿವಾಸಿಯಾಗಿದ್ದ ಸೂರಂ ರಾಮಯ್ಯನವರು ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ 3:30ಕ್ಕೆ ನಮ್ಮೆಲ್ಲರನ್ನು ಅಗಲಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಅವರು ಗಾಂಧೀಜಿಯವರ ವಿಚಾರಧಾರೆ ಮತ್ತು ಅವರ ಕರೆಗಳಿಗೆ ಆಕರ್ಷಿತರಾಗಿದ್ದರು.

ಸ್ವಾತಂತ್ರ್ಯದ ನಂತರ ನಡೆದ ಎರಡನೇಯ ವಿಧಾನಸಭಾ ಚುನಾವಣೆಯಲ್ಲಿ 1969-72ರ ಅವಧಿಗೆ ಹೊಸಕೋಟೆ- ದೇವನಹಳ್ಳಿ ಜಂಟಿ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿದ್ದರು. ಗ್ರಾಮ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಅವರು, ಹೊಸಕೋಟೆ ತಾಲೂಕಿನಲ್ಲಿ ನಡೆಯುತ್ತಿದ್ದ ಪ್ರಜಾಸತ್ತಾತ್ಮಕ ಜನ ಚಳುವಳಿಗಳಲ್ಲಿ ವಿಶೇಷವಾಗಿ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನಡೆದ ರೈತರ ಹೋರಾಟಗಳಲ್ಲಿ, ಕಾರ್ಮಿಕರ ಹೋರಾಟಗಳಲ್ಲಿ ಹಾಗೂ ಸಿಪಿಐ(ಎಂ) ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ನೂತನ ವಿದ್ಯುತ್ ಕಾಯ್ದೆ ಮತ್ತು ಮೀಟರಿಕರಣದ ವಿರುದ್ಧದ ಪ್ರಬಲ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ಬೆಂಗಳೂರು ಜಿಲ್ಲಾ ಸಮಿತಿಯ ಗೌರವಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹಾಗೇಯೇ ಸಾಮಾಜಿಕ ಸಮಸ್ಯೆಗಳು, ಭ್ರಷ್ಟಾಚಾರದ ವಿರುದ್ಧವಾಗಿಯೂ ನಡೆದ ಹಲವು ಹೋರಾಟಗಳಲ್ಲಿ ಮತ್ತು ಹೋರಾಟ ರೂಪಿಸುವಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ ಅವರು, ಸೂಲಿಬೆಲೆ ಒಳಗೊಂಡು ತಾಲೂಕಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಜನ ಸಾಮಾನ್ಯರಿಗೆ ಶಿಕ್ಷಣವನ್ನು ನೀಡಿ ಸ್ವಾಭಿಮಾನ, ದೇಶಾಭಿಮಾನ ಮೂಡಿಸಲು ಶ್ರಮಿಸಿದ್ದರು. ಅದಕ್ಕಾಗಿ ಸ್ವಾಮಿ ವಿವೇಕಾನಂದ ವಿದ್ಯಾ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಶ್ರಮಿಸುತ್ತಾ ಬಂದಿದ್ದರು.ಸೂರಂ ರಾಮಯ್ಯನವರ ಅಗಲಿಕೆಯು ನಿಸ್ವಾರ್ಥತೆಯಿಂದ ತಮ್ಮನ್ನು ತೊಡಗಿಸಿಕೊಂಡ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಜನ ಚಳುವಳಿಗಳು ನೆಚ್ಚಿನ ಒಡನಾಡಿಯನ್ನು ಕಳೆದುಕೊಂಡಂತಾಗಿದೆ. ಇದನ್ನೂ ಓದಿ: ಬಿಎಸ್‍ವೈಗೆ ಸ್ವಾಭಿಮಾನ ಇದ್ದಿದ್ದರೆ ರಾಜೀನಾಮೆ ನೀಡಬೇಕಿತ್ತು: ವಿ.ಎಸ್ ಉಗ್ರಪ್ಪ

ಅನೇಕ ಜನಪರ ಹೋರಾಟಗಳು, ಕಾರ್ಯಕ್ರಮಗಳಲ್ಲಿ ಮತ್ತು ಅತ್ಯಂತ ಸಂದಿಗ್ಧ ಹಾಗೂ ಸಂಕೀರ್ಣವಾದ ಸವಾಲುಗಳ ಎದುರಿಸುವುದರಲ್ಲಿ ನಡೆದ ಹೋರಾಟಗಳಲ್ಲಿ ಭಾಗವಹಿಸಿ ಸ್ಫೂರ್ತಿ ತುಂಬಿದ್ದು ಸ್ಮರಣೀಯವಾಗಿದೆ. ಹೊಸಕೋಟೆ ತಾಲೂಕಿನಲ್ಲಿ ಜೋಡಿ ಇನಾಮ್ತಿಗೆ ಪ್ರತಿರೋಧವಾಗಿ ನಡೆದ ಚಳುವಳಿಗಳಲ್ಲಿ ನಮ್ಮ ತಂದೆ ಎಂ.ಎಂ.ರಾಮಸ್ವಾಮಿರವರ ಒಡನಾಡಿಯಾಗಿದ್ದರು. ಅಂದಿನ ದಿನಗಳಲ್ಲಿ ಹೊಸಕೋಟೆ ತಾಲೂಕು ರಾಜಕೀಯ ಹಿಂಸಾಚಾರ ಮತ್ತು ದಬ್ಬಾಳಿಕೆಗಳಿಗೆ ಕುಖ್ಯಾತಿ ಆಗಿದ್ದನ್ನು ಅಂತಹ ಸನ್ನಿವೇಶದಲ್ಲಿ ಜನ ಚಳುವಳಿಗಳು ಮುನ್ನಡೆಯಲು ಸೂರಂ ರಾಮಯ್ಯನವರ ಭಾಗವಹಿಸುವಿಕೆ, ನೇತೃತ್ವಗಳು ಆತ್ಮ ವಿಶ್ವಾಸ, ಸ್ಫೂರ್ತಿಯನ್ನು ತುಂಬುತ್ತಿದ್ದವು ಎನ್ನುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು.

ಸೂರಂ ರಾಮಯ್ಯನವರ ಅಗಲಿಕೆ ಸ್ವಾತಂತ್ರ್ಯ ಸಂಗ್ರಾಮದ ಒಂದು ಪ್ರಮುಖ ಕೊಂಡಿಯನ್ನು, ಜನಸ್ನೇಹಿಯನ್ನು ಕಳೆದುಕೊಂಡಂತಾಗಿದೆ. ಇದನ್ನೂ ಓದಿ:  ಸಿದ್ದಲಿಂಗಯ್ಯರನ್ನು ರಾಷ್ಟ್ರಕವಿಯಾಗಿ ಘೋಷಣೆ ವಿಚಾರ ಸರ್ಕಾರದೊಂದಿಗೆ ಚರ್ಚಿಸುತ್ತೇನೆ: ಜೋಶಿ

Click to comment

Leave a Reply

Your email address will not be published. Required fields are marked *

Advertisement