Connect with us

Latest

ಕೊರೊನಾದಿಂದ ಮೃತಪಟ್ಟರೆ ಪರಿಹಾರ ನೀಡಿ – ಸುಪ್ರೀಂ ಮಹತ್ವದ ಆದೇಶ

Published

on

Share this

ನವದೆಹಲಿ: ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಬೇಕು. ಪರಿಹಾರದ ಮೊತ್ತವನ್ನ ಕೇಂದ್ರ ಸರ್ಕಾರವೇ ನಿರ್ಧರಿಸಬೇಕು ಎಂದು ಸುಪ್ರೀಂಕೋರ್ಟ್ ನ ನ್ಯಾ.ಅಶೋಕ್ ಭೂಷಣ್ ಪೀಠ ಆದೇಶ ನೀಡಿದೆ.

ಕೋವಿಡ್ ನಿಂದ ಮೃತ ಕುಟುಂಬಗಳಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡಲು ಆಗಲ್ಲ. ಹಾಗಾಗಿ ಎನ್‍ಡಿಎಂಎ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ) ಪ್ರತಿ ಕುಟುಂಬಕ್ಕೆ ಕನಿಷ್ಠ ಪರಿಹಾರ ಸಿಗುವಂತಹ ವ್ಯವಸ್ಥೆಯನ್ನ ರೂಪಿಸುವಂತೆ ಸೂಚಿಸಿದೆ. ಕೋವಿಡ್‍ಗೆ ಸಂಬಂಧಿಸಿದ ಮರಣ ಪ್ರಮಾಣ ಪತ್ರಗಳನ್ನು ವಿತರಿಸಬೇಕು. ವಿತರಣೆ ಪ್ರಕ್ರಿಯೆ ಆರಂಭಗೊಂಡಿದ್ರೆ ವ್ಯವಸ್ಥೆಯಲ್ಲಿ ಸುಧಾರಣೆ ತನ್ನಿ ಎಂದು ಸುಪ್ರೀಂಕೋರ್ಟ್ ಎನ್‍ಡಿಎಂಎಗೆ ನಿರ್ದೇಶನ ನೀಡಿದೆ. ಇದೇ ವೇಳೆ ಎನ್‍ಡಿಎಂಗೆ ಸುಪ್ರೀಂಕೋರ್ಟ್ ಚಾಟಿ ಸಹ ಬೀಸಿತು.

ಎನ್‍ಡಿಎಂಗೆ ಚಾಟಿ:
ಪರಿಹಾರ ನೀಡುವ ಬಗ್ಗೆ ಎನ್‍ಡಿಎಂಎ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ಮಾರ್ಗಸೂಚಿ ರೂಪಿಸುವಲ್ಲಿ ವಿಫಲವಾಗಿದೆ ಎಂದು ಎನ್‍ಡಿಎಂಗೆ ನ್ಯಾಯಾಲಯ ಚಾಟಿ ಬೀಸಿತ್ತು. ಎನ್‍ಡಿಎಂಎ ಆರು ತಿಂಗಳಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಮಾರ್ಗಸೂಚಿ ರೂಪಿಸಬೇಕು. ಪರಿಹಾರದ ಮೊತ್ತ ಸರ್ಕಾರ, ಎನ್‍ಡಿಎಂಗೆ ವಿವೇಚನೆಗೆ ಬಿಟ್ಟದ್ದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಅರ್ಜಿಯಲ್ಲಿ ಏನಿತ್ತು?:
ಕೊರೊನಾದಿಂದ ಮೃತರ ಕುಟುಂಬಕ್ಕೆ ವಿಪತ್ತು ಕಾಯ್ದೆಯಡಿ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಇದೇ ಅರ್ಜಿಯಲ್ಲಿ ಕೋವಿಡ್‍ಗೆ ಸಂಬಂಧಿಸಿದ ಮರಣ ಪ್ರಮಾಣ ಪತ್ರ ನೀಡುವ ವ್ಯವಸ್ಥೆಯ ಸರಳೀಕರಣದ ಬಗ್ಗೆ ಕೇಳಲಾಗಿತ್ತು. ಈ ಸಂಬಂಧ ನ್ಯಾಯಾಲಯ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು.

ಕೇಂದ್ರ ಹೇಳಿದ್ದೇನು?:
ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಕೊರೊನಾಗೆ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ. ಇದರ ಬದಲಾಗಿ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಸದೃಢ ಮಾಡಬೇಕಿದೆ ಎಂದು ಕೇಂದ್ರ ತನ್ನ ವಾದ ಸಲ್ಲಿಸಿತ್ತು.

ಇದೇ ವೇಳೆ ಕೇಂದ್ರ, ವಿಪತ್ತು ಕಾಯ್ದೆಯಡಿಯಲ್ಲಿ ಮೃತರ ಕುಟುಂಬಕ್ಕೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಆದ್ರೆ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಕುಟುಂಗಳಿಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ ಎಂಬ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದಿತ್ತು. ಇದನ್ನೂ ಓದಿ: ರಾಜ್ಯದಲ್ಲಿಯ ಲಸಿಕೆ ಕೊರತೆಯನ್ನು ಒಪ್ಪಿಕೊಂಡ ಸಚಿವ ಸುಧಾಕರ್

ಎಷ್ಟು ಸಾವು?: ಕಳೆದ ಒಂದೂವರೆ ವರ್ಷದಲ್ಲಿ ಮಹಾಮಾರಿ ಕೊರೊನಾ ಬಲಿ ಪಡೆದುಕೊಂಡ ಜನರ ಸಂಖ್ಯೆ ನಾಲ್ಕು ಲಕ್ಷ ಸನಿಹದಲ್ಲಿದೆ. ಸದ್ಯ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದ್ದು, ಎಲ್ಲ ರಾಜ್ಯಗಳು ಅನ್‍ಲಾಕ್ ಪ್ರಕ್ರಿಯೆಯನ್ನ ಆರಂಭಿಸಿವೆ. ಎರಡ್ಮೂರು ತಿಂಗಳಿನಲ್ಲಿಯೇ ಕೊರೊನಾ ಮೂರನೇ ಅಲೆ ಸ್ಫೋಟಗೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಭಾರತದಲ್ಲಿ ಇದುವರೆಗೂ 3,98,454 ಜನರು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ‘ಸಾಲ’ ರೂಪದ ಸಹಾಯ

ಕರ್ನಾಟಕದಲ್ಲಿ ಪರಿಹಾರ ಘೋಷಣೆ:
ಇತ್ತ ಕರ್ನಾಟಕ ಸರ್ಕಾರ ಕೊರೊನಾದಿಂದ ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಘೋಷಣೆ ಮಾಡಿದೆ. ಇದನ್ನೂ ಓದಿ: ಜಿಎಸ್‍ಟಿ ದರ ಕಡಿತದ ಬೊಮ್ಮಾಯಿ ಮನವಿಗೆ ನಿರ್ಮಲಾ ಸೀತಾರಾಮನ್ ಸಮ್ಮತಿ

Click to comment

Leave a Reply

Your email address will not be published. Required fields are marked *

Advertisement