Monday, 16th December 2019

ಮಸೀದಿ ನಿರ್ಮಾಣಕ್ಕೆ ಹಿಂದೂಗಳು ಸಹಾಯ ಮಾಡಬೇಕು- ಬಾಬಾ ರಾಮ್‍ದೇವ್

ನವದೆಹಲಿ: ಮಸೀದಿ ನಿರ್ಮಾಣಕ್ಕೆ ಹಿಂದೂ ಸಹೋದರರು ಸಹಾಯ ಮಾಡಬೇಕು ಎಂದು ಯೋಗ ಗುರು ಬಾಬಾ ರಾಮ್‍ದೇವ್ ಕರೆ ನೀಡಿದ್ದಾರೆ.

ರಾಮ ಜನ್ಮ ಭೂಮಿ ತೀರ್ಪಿನ ಕುರಿತು ಮಾತನಾಡಿದ ಅವರು, ಇದು ಐತಿಹಾಸಿಕ ತೀರ್ಪು, ಭವ್ಯವಾದ ರಾಮ ಮಂದಿರವನ್ನು ಕಟ್ಟಲಾಗುವುದು. ಮುಸ್ಲಿಮರಿಗೆ ಪರ್ಯಾಯ ಭೂಮಿಯನ್ನು ಮಂಜೂರು ಮಾಡುವ ನಿರ್ಧಾರವೂ ಸ್ವಾಗತಾರ್ಹ. ಮಸೀದಿ ನಿರ್ಮಾಣಕ್ಕೆ ಹಿಂದೂ ಸಹೋದರರು ಸಹಾಯ ಮಾಡಬೇಕು, ಮಾಡುತ್ತಾರೆಂದು ನಂಬಿದ್ದೇನೆ ಎಂದು ಯೋಗ ಗುರು ಬಾಬಾ ರಾಮ್‍ದೇವ್ ಅಭಿಪ್ರಾಯಪಟ್ಟಿದ್ದಾರೆ.

ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಯೋಗ ಗುರು ಬಾಬಾ ರಾಮ್‍ದೇವ್ ಶ್ಲಾಘಿಸಿದ್ದು, ಐತಿಹಾಸಿಕ ತೀರ್ಪು ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ಮಸೀದಿ ನಿರ್ಮಿಸಲು ಹಿಂದೂಗಳು ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮಂದಿರ-ಮಸೀದಿಗಳಿಂದ ಭಾರತ ಹೊರಬಂದು ಭಾರತವನ್ನು ವಿಶ್ವದ ದೊಡ್ಡ ಆರ್ಥಿಕ, ಕೃಷಿ ಹಾಗೂ ಮಿಲಿಟರಿ ಶಕ್ತಿಯನ್ನಾಗಿಸುವ ಕುರಿತು ಚಿಂತಿಸಬೇಕಾದ ಸಮಯ ಇದಾಗಿದೆ. ದೇವಾಲಯ ಮತ್ತು ಮಸೀದಿ ನಿರ್ಮಿಸಲು ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಸಹಾಯ ಮಾಡಬೇಕು. ಅಗತ್ಯವಿದ್ದರೆ ಅವರು ದೇವಾಲಯ ಮತ್ತು ಮಸೀದಿ ನಿರ್ಮಿಸುವ ಪ್ರಯತ್ನಗಳಿಗೆ ಕೈಜೋಡಿಸುತ್ತಾರೆ ಎಂದರು.

ರಾಮ ಜನ್ಮಭೂಮಿ ಕುರಿತ ಅಯೋಧ್ಯೆ ತೀರ್ಪನ್ನು ಸುಪ್ರೀಂ ಕೋರ್ಟ್ ಶನಿವಾರ ಪ್ರಕಟಿಸಿದೆ. ದೇವಸ್ಥಾನ ನಿರ್ಮಾಣಕ್ಕೆ ಸಮಿತಿ ರಚಿಸುವಂತೆ ತಿಳಿಸಿದರೆ, ಮಸೀದಿ ನಿರ್ಮಿಸಲು 5 ಎಕರೆ ಪರ್ಯಾಯ ಭೂಮಿ ನೀಡುವಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ದೇವಾಲಯದ ಕಟ್ಟಡ ಸೇರಿದಂತೆ ದೇವಾಲಯದ ಎಲ್ಲ ವಿಷಯಗಳನ್ನು ಸಮಿತಿ ನೋಡಿಕೊಳ್ಳಲಿದೆ.

ಗೌರವಾನ್ವಿತ ಸುಪ್ರೀಂ ಕೋರ್ಟ್ ಅಯೋಧ್ಯೆ ಕುರಿತು ತೀರ್ಪು ಪ್ರಕಟಿಸಿದೆ. ಈ ತೀರ್ಪನ್ನು ಯಾರಿಗೂ ಗೆಲವು ಅಥವಾ ಸೋಲು ಎಂದು ಭಾವಿಸಬಾರದು. ರಾಮ ರಹೀಮನ ಭಕ್ತಿಗಿಂತ, ರಾಷ್ಟ್ರ ಭಕ್ತಿಯ ಮನೋಭಾವವನ್ನು ಬಲಪಡಿಸುವುದು ಕಡ್ಡಾಯವಾಗಿದೆ. ಶಾಂತಿ ಸಾಮರಸ್ಯ ಮೇಲುಗೈ ಸಾಧಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *