Monday, 20th May 2019

ಕಳ್ಳತನ ಮಾಡ್ತಿದ್ದವರಿಗೆ ಎಚ್ಚರಿಕೆ ಕೊಟ್ಟ ಸೂಪರ್‌ವೈಜರನ್ನೇ ಕೊಲೆಗೈದ್ರು..!

ರಾಮನಗರ: ಕಬ್ಬಿಣದ ವಸ್ತುಗಳನ್ನು ಕಳವು ಮಾಡುತ್ತಿದ್ದವರ ವಿರುದ್ಧ ದೂರು ನೀಡಲು ಮುಂದಾದ ಸೂಪರ್ ವೈಜರ್ ನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕಗ್ಗಲೀಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕು ಗಾಂಧಿನಗರದ ಮಹಮದ್ ಏಜಾಜ್ ಷರೀಫ್, ಮಹಮದ್ ಪ್ಯಾರು, ಸುಹೇಲ್ ಅಹಮದ್ ಹಾಗೂ ಸುಬ್ರಮಣ್ಯಪುರ ನಿವಾಸಿ ಇಸ್ಮಾಯಿಲ್ ಬಂಧಿತ ಆರೋಪಿಗಳು.

ಏನಿದು ಪ್ರಕರಣ:
ಬೆಂಗಳೂರು – ಕನಕಪುರ ಮುಖ್ಯರಸ್ತೆ ಕಗ್ಗಲೀಪುರ ಟೌನ್ ಕೆರೆಯ ಬಳಿಯ ರಸ್ತೆ ಅಗಲೀಕರಣದ ಸ್ಥಳದಲ್ಲಿ ಫೆ.7 ರಂದು ಅಪರಿಚಿತ ವ್ಯಕ್ತಿಯ ಶವ ಗೋಣಿ ಚೀಲದಲ್ಲಿ ಪತ್ತೆಯಾಗಿತ್ತು. ಮೃತ ವ್ಯಕ್ತಿಯ ಎರಡು ಕಾಲುಗಳನ್ನು ಕತ್ತರಿಸಿ ಚೀಲದಲ್ಲಿ ಕಟ್ಟಿ ತಂದು ಎಸೆದಿದ್ದರು.

ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಗ್ಗಲೀಪುರ ಠಾಣೆಯ ಪೊಲೀಸರು ತನಿಖೆ ನಡೆಸಿ ವೇಳೆ ಮೃತ ವ್ಯಕ್ತಿ ಆಂಧ್ರಪ್ರದೇಶ ಕಡಪ ಜಿಲ್ಲೆ ಪುಲಿವೆಂದಲ ತಾಲೂಕಿನ ಗಂಗಾರಪುವಂಡ್ಲಪಲ್ಲಿ ಗ್ರಾಮದ ಸಗಿಲಿ ನಾಗೇಶ್ವರರೆಡ್ಡಿ (32) ಎಂದು ತಿಳಿದುಬಂದಿತ್ತು.

ಕಗ್ಗಲೀಪುರ ಟೌನ್ ಬೈಪಾಸ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜೀಪ್ ಚಾಲಕನಾಗಿದ್ದ ಏಜಾಜ್ ಷರೀಫ್, ಕಾಮಗಾರಿಗೆ ಬಳಸುವ ಕಬ್ಬಿಣದ ವಸ್ತುಗಳನ್ನು ಹಾಕಿಕೊಳ್ಳಲು ಮತ್ತು ಕೆಲಸಗಾರರು ಇರಲು ನಿರ್ಮಿಸಿದ್ದ ಶೆಡ್ ಬಳಿ ಹಾಕಿದ್ದ ಸೆಂಟ್ರಿಂಗ್ ಕಬ್ಬಿಣದ ವಸ್ತುಗಳನ್ನು ಮಹಮದ್ ಪ್ಯಾರು ನೊಂದಿಗೆ ಸೇರಿಕೊಂಡು ಆಗಾಗ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು.

ಈ ವಿಚಾರ ಸೂಪರ್ ವೈಜರ್ ನಾಗೇಶ್ವರ ರೆಡ್ಡಿಗೆ ಗೊತ್ತಾಗಿ ಕೆಲಸದಿಂದ ತೆಗೆಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಏಜಾಜ್ ಷರೀಫ್ ಗೆ ಎಚ್ಚರಿಕೆ ನೀಡಿದ್ದರು. ಇದರಿಂದ ನಾಗೇಶ್ವರ ರೆಡ್ಡಿ ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದ ಆರೋಪಿಗಳಾದ ಮಹಮ್ಮದ್ ಏಜಾಜ್ ಷರೀಫ್ ಮತ್ತು ಮಹಮ್ಮದ್ ಪ್ಯಾರು ಸಂಚು ರೂಪಿಸಿ ಫೆ.6 ರ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಶೆಡ್ಡಿನಲ್ಲಿದ್ದ ಕಬ್ಬಿಣದ ಪೈಪಿನಿಂದ ತಲೆಗೆ ಹೊಡೆದು ನಾಗೇಶ್ವರ ರೆಡ್ಡಿರನ್ನು ಕೊಲೆ ಮಾಡಿದ್ದರು.

ಕೊಲೆಯನ್ನು ಕೃತ್ಯವನ್ನು ಮರೆಮಾಚಲು ಮರುದಿನ ಫೆ.7 ರ ರಾತ್ರಿ ಮೃತನ ಎರಡೂ ಕಾಲುಗಳನ್ನು ಚಾಕುವಿನಿಂದ ಕತ್ತರಿಸಿ ಬಳಿಕ ಅವುಗಳನ್ನು ಅಲ್ಲೇ ಪಕ್ಕದಲ್ಲಿದ್ದ ಲೇಔಟ್ ಯುಜಿಡಿ ಮ್ಯಾನ್ ಹೋಲ್ ಗೆ ಎಸೆದು ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಕಗ್ಗಲೀಪುರ ಕೆರೆಯ ಬಳಿ ತಂದು ಎಸೆದಿದ್ದರು.

ಸದ್ಯ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ವಾಹನ, ಆಯುಧಗಳು ಮತ್ತು ಕಳ್ಳತನವಾಗಿದ್ದ ಸುಮಾರು ಮೂರೂವರೆ ಟನ್ ತೂಕದ ಕಬ್ಬಿಣದ ಸೆಂಟ್ರಿಂಗ್ ವಸ್ತುಗಳ ಸಮೇತ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *