Connect with us

Cricket

3 ವಿಕೆಟ್ ಪಡೆದು 14 ರನ್ ನೀಡಿದ ರಶೀದ್ – ಖಾನ್ ಸ್ಪಿನ್ ಮೋಡಿಗೆ ಡೆಲ್ಲಿ ಉಡೀಸ್

Published

on

– ಭುವನೇಶ್ವರ್, ನಟರಾಜನ್ ಮಾರಕ ದಾಳಿಗೆ ಐಯ್ಯರ್ ಪಡೆ ತತ್ತರ

ಅಬುಧಾಬಿ: ಮ್ಯಾಜಿಕಲ್ ಸ್ಪಿನ್ ಬೌಲರ್ ರಶೀದ್ ಖಾನ್ ಅವರ ಮಾರಕ ದಾಳಿಗೆ ನಲುಗಿದ ಡೆಲ್ಲಿ ಐಪಿಎಲ್-2020ಯ 11ನೇ ಪಂದ್ಯದಲ್ಲಿ ಸೋಲುಂಡಿದೆ. ಈ ಮೂಲಕ ಸನ್‍ರೈಸರ್ಸ್ ಹೈದರಾಬಾದ್ ತಂಡ ತನ್ನ ಮೊದಲ ಗೆಲುವನ್ನು ದಾಖಲಿಸಿದೆ.

ಇಂದು ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಜಾನಿ ಬೈರ್‌ಸ್ಟೋವ್ ಅವರ ಉತ್ತಮ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 162 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ರೈಸರ್ಸ್ ಆಕ್ರಮಣಕಾರಿ ಬೌಲಿಂಗ್‍ಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ ಕೇವಲ 147 ರನ್ ಹೊಡೆದು 15 ರನ್‍ಗಳ ಅಂತರದಿಂದ ಸೋಲನ್ನು ಒಪ್ಪಿಕೊಂಡಿತು.

ಟ್ವಿಸ್ಟ್ ನೀಡಿದ ರಶೀದ್ ಖಾನ್:
ತಾನು ಮಾಡಿದ ಮೊದಲ ಓವರಿನಲ್ಲಿ ಸೆಟ್ ಬ್ಯಾಟ್ಸ್ ಮ್ಯಾನ್ ನಾಯಕ ಶ್ರೇಯಸ್ ಐಯ್ಯರ್ ಅವರನ್ನು ಔಟ್ ಮಾಡಿದ್ದ ರಶೀದ್ ಖಾನ್ ಮತ್ತೆ 12ನೇ ಓವರಿನಲ್ಲಿ ಮ್ಯಾಜಿಕ್ ಮಾಡಿದರು. ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದಿದ್ದ ಶಿಖರ್ ಧವನ್ ಅವರನ್ನು ಔಟ್ ಮಾಡಿದರು. ನಂತರ 16ನೇ ಓವರಿನಲ್ಲಿ ಸ್ಫೋಟಕ ಆಟಕ್ಕೆ ಮುಂದಾಗಿದ್ದ ರಿಷಬ್ ಪಂತ್ ಅವರನ್ನು ಔಟ್ ಮಾಡಿದರು. ಈ ಮೂಲಕ ನಾಲ್ಕು ಓವರ್ ಬೌಲ್ ಮಾಡಿ ಪ್ರಮುಖ ಮೂರು ವಿಕೆಟ್ ಕಿತ್ತು ಕೇವಲ 14 ರನ್ ನೀಡಿದರು.

ಪಂದ್ಯದಲ್ಲಿ ಉತ್ತಮವಾಗಿ ಬೌಲ್ ಮಾಡಿದ ಭುವನೇಶ್ವರ್ ಕುಮಾರ್ ಅವರು ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು 25 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ದೇಶೀಯ ಪ್ರತಿಭೆ ಟಿ ನಟರಾಜನ್ ನಾಲ್ಕು ಓವರ್ ಬೌಲ್ ಮಾಡಿ ಒಂದು ವಿಕೆಟ್ ಪಡೆದು, 25 ರನ್ ನೀಡಿದರು. ಜೊತೆಗೆ ಪ್ರಮುಖ 17ನೇ ಓವರ್ ಬೌಲ್ ಮಾಡಿ ಪಂದ್ಯಕ್ಕೆ ಟ್ವಿಸ್ಟ್ ನೀಡಿದರು.

ಡೆಲ್ಲಿ ಕ್ಯಾಪಿಟಲ್ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡಿದ ಭುವನೇಶ್ವರ್ ಕುಮಾರ್ ಅವರು ಉತ್ತಮ ಲಯದಲ್ಲಿದ್ದ ಪೃಥ್ವಿ ಶಾ ಅವರನ್ನು ಔಟ್ ಮಾಡಿದರು. ಕೇವಲ ಎರಡು ರನ್ ಗಳಿಸಿದ್ದ ಶಾ ಜಾನಿ ಬೈರ್‌ಸ್ಟೋವ್ ಅವರಿಗೆ ಕ್ಯಾಚ್ ಇತ್ತು ಹೊರನಡೆದರು. ನಂತರ ಜೊತೆಯಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ಶಿಖರ್ ಧವನ್ ನಿಧಾನವಾಗಿ ಜೊತೆಯಾಟವಾಡಿದರು. ಪರಿಣಾಮ ಆರು ಓವರ್ ಮುಕ್ತಾಯಕ್ಕೆ ಡೆಲ್ಲಿ ಒಂದು ವಿಕೆಟ್ ಕಳೆದುಕೊಂಡು 34 ರನ್ ಸೇರಿಸಿತು.

ಈ ವೇಳೆ ಬೌಲಿಂಗ್‍ಗೆ ಇಳಿದ ರಶೀದ್ ಖಾನ್ ಅವರು ನಾಯಕ ಶ್ರೇಯಸ್ ಐಯ್ಯರ್ ವಿಕೆಟ್ ಕೀಳುವ ಮೂಲಕ ಡೆಲ್ಲಿ ಆಘಾತ ನೀಡಿದರು. ಈ ಮೂಲಕ 17 ರನ್ ಗಳಿಸಿದ್ದ ಐಯ್ಯರ್ ಅಬ್ದುಲ್ ಸಮದ್ ಅವರಿಗೆ ಕ್ಯಾಚ್ ನೀಡಿ ಹೊರನಡೆದರು. ಈ ನಡುವೆ ಹೈದರಾಬಾದ್ ಸ್ಪಿನ್ನರ್ ಗಳು ಬಿಗುವಿನ ಬೌಲಿಂಗ್ ದಾಳಿ ಮಾಡಿದರು. ಹೀಗಾಗಿ ರನ್ ಕದಿಯಲು ಡೆಲ್ಲಿ ಬ್ಯಾಟ್ಸ್ ಮ್ಯಾನ್‍ಗಳು ಕಷ್ಟಪಡಬೇಕಾಯ್ತು. 11 ಓವರ್ ಮುಕ್ತಾಯ ಡೆಲ್ಲಿ ತಂಡ ಎರಡು ವಿಕೆಟ್ ಕಳೆದುಕೊಂಡು ಕೇವಲ 60 ರನ್ ಗಳಿಸಿತು.

ನಂತರ ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದಿದ್ದ ಶಿಖರ್ ಧವನ್ (31 ಎಸೆತ, 34 ರನ್, 4 ಫೋರ್) ಅವರನ್ನು ಔಟ್ ಮಾಡಿದರು. ಈ ವೇಳೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ರಿಷಬ್ ಪಂತ್ ಅವರು ತಂಡದ ಮೊತ್ತಕ್ಕೆ ಸ್ವಲ್ಪ ವೇಗ ನೀಡಿದರು. ನಂತರ ಶಿಮ್ರಾನ್ ಹೆಟ್ಮಿಯರ್ ಅವರ ಕೂಡ 14ನೇ ಓವರಿನಲ್ಲಿ ಬ್ಯಾಕ್ ಟು ಬ್ಯಾಕ್ ಡೆಲ್ಲಿಯನ್ನು 100ರ ಗಡಿ ದಾಟಿಸಿದರು. ಆದರೆ ನಂತರ 15ನೇ ಓವರ್ ಬೌಲ್ ಮಾಡಿ ವನೇಶ್ವರ್ ಕುಮಾರ್ ಅವರು ಹೆಟ್ಮಿಯರ್ ಅವರನ್ನು ಔಟ್ ಮಾಡಿದರು. 12 ಬಾಲಿಗೆ 21 ರನ್ ಸಿಡಿಸಿ ಆಡುತ್ತಿದ್ದ ಶಿಮ್ರಾನ್ ಹೆಟ್ಮಿಯರ್ ಮನೀಶ್ ಪಾಂಡೆ ಹಿಡಿದ ಭರ್ಜರಿ ಕ್ಯಾಚಿಗೆ ಬಲಿಯಾದರು.

ನಂತರ ದೊಡ್ಡ ಹೊಡೆತಕ್ಕೆ ಕೈಹಾಕಿದ ರಿಷಬ್ ಪಂತ್ ಅವರು, 16ನೇ ಓವರಿನಲ್ಲಿ 27 ಬಾಲಿಗೆ 28 ರನ್ ಸಿಡಿಸಿ ರಶೀದ್ ಖಾನ್ ಅವರಿಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಪಂದ್ಯದ ಪ್ರಮುಖ ಘಟ್ಟದಲ್ಲಿ ರಶೀದ್ ಒಳ್ಳೆ ಬ್ರೇಕ್ ನೀಡಿದರು. ಈ ವೇಳೆ 17ನೇ ಓವರ್ ಬೌಲ್ ಮಾಡಿದ ಟಿ ನಟರಾಜನ್ ಅವರು ಡೇಂಜರ್ಸ್ ಮಾರ್ಕಸ್ ಸ್ಟೊಯಿನಿಸ್ ಅವರನ್ನು ಔಟ್ ಮಾಡಿ ಕೇವಲ ಏಳು ರನ್ ನೀಡಿದ್ದು, ಸನ್‍ರೈಸರ್ಸ್ ತಂಡಕ್ಕೆ ಗೆಲುವಿನ ಅಡಿಪಾಯ ಹಾಕಿಕೊಟ್ಟಿತ್ತು.

Click to comment

Leave a Reply

Your email address will not be published. Required fields are marked *