Connect with us

10 ಸಾವಿರ ಕಾರ್ಮಿಕರಿಗೆ ಅನ್ನ ನೀಡಿದ ನಟಿ ಸನ್ನಿಲಿಯೋನ್

10 ಸಾವಿರ ಕಾರ್ಮಿಕರಿಗೆ ಅನ್ನ ನೀಡಿದ ನಟಿ ಸನ್ನಿಲಿಯೋನ್

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ನಿಂದ ಭಾರತ ನಲುಗುತ್ತಿದೆ. ಇದರ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಕೆಲವೆಡೆ ಲಾಕ್ ಡೌನ್ ಮಾಡಿರುವ ಪರಿಣಾಮ ಅನೇಕ ಮಂದಿ ವಲಸೆ ಕಾರ್ಮಿಕರು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಇಂತವರಿಗೆ ಅನೇಕ ಮಂದಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅಂತೆಯೇ ಇದೀಗ ಬಾಲಿವುಡ್ ನಟಿ ಸನ್ನಿಲಿಯೋನ್ ಕೂಡ ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.

ಬಾಲಿವುಡ್ ನಟಿ ಸನ್ನಿಲಿಯೋನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಸದಾ ಕಷ್ಟಕ್ಕೆ ಮಿಡಿಯುವ ಸನ್ನಿ ಮನ ಕೋವಿಡ್ ಸಂಕಷ್ಟದಲ್ಲಿರುವವರ ಪಾಲಿಗೂ ನೆರವಾಗುವ ಮೂಲಕ ಮಾನವೀಯ ಕಾರ್ಯ ಮಾಡಿದ್ದಾರೆ.

ಪೇಟಾದ ಜೊತೆ ಕೈ ಜೋಡಿಸಿರುವ ಸನ್ನಿ, ರಾಷ್ಟ್ರ ರಾಜಧಾನಿಯಲ್ಲಿ ಹಸಿದಿರುವ ಸುಮಾರು 10 ಸಾವಿರ ಮಂದಿಗೆ ಅನ್ನ ನೀಡುವ ಕೆಲಸ ಮಾಡಿದ್ದಾರೆ. ಸನ್ನಿ ಅವರ ಈ ಕಾರ್ಯವನ್ನು ಉದಯ್ ಫೌಂಡೇಶನ್ ಎಂಬ ಎನ್‍ಜಿಒ ಕೂಡ ಬೆಂಬಲಿಸಿದೆ. ಕಾರ್ಮಿಕರಿಗೆ ಆಹಾರದ ಜೊತೆ ಹಣ್ಣು ಕೂಡ ನೀಡಿದ್ದಾರೆ.

ಈ ಸಂಬಂಧ ಮಾತನಾಡಿರುವ ಸನ್ನಿಲಿಯೋನ್, ಸದ್ಯ ನಾವು ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಆದರೆ ಸಹಾನುಭೂತಿ ಮತ್ತು ಒಗ್ಗಟ್ಟಿನೊಂದಿಗೆ ನಾವು ಮುಂದೆ ಬರುತ್ತೇವೆ. ಪೆಟಾ ಇಂಡಿಯಾದೊಂದಿಗೆ ಮತ್ತೆ ಕೈಜೋಡಿಸಲು ನನಗೆ ಸಂತೋಷವಾಗಿದೆ. ಈ ಸಮಯದಲ್ಲಿ ಅಗತ್ಯವಿರುವ ಸಾವಿರಾರು ಜನರಿಗೆ ಪ್ರೋಟೀನ್ ತುಂಬಿದ ಸಸ್ಯಾಹಾರಿ ಆಹಾರ ನೀಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಈ ಹಿಂದೆಯೂ ಅನೇಕ ಮಂದಿ ಕಾರ್ಮಿಕರಿಗೆ ಆಹಾರ ನೀಡಿದ್ದಾರೆ. ನಟ ಸಲ್ಮಾನ್ ಖಾನ್ ಕೂಡ ತಮ್ಮ ಟ್ರಕ್‍ಗಳ ಮೂಲಕ ಮುಂಬೈನಲ್ಲಿ ಸಿಲುಕಿರುವ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸುತ್ತಿದ್ದಾರೆ. ಸಲ್ಮಾನ್‍ರ ಆಹಾರ ಟ್ರಕ್‍ಗಳು ವರ್ಲಿ ಮತ್ತು ಜುಹು ಪ್ರದೇಶಗಳಲ್ಲಿ ಆಹಾರ ಕಿಟ್‍ಗಳನ್ನು ವಿತರಿಸುತ್ತಿವೆ. ಶಿಲ್ಪಾ ಶೆಟ್ಟಿ ಕೂಡ ತಮ್ಮ ಫೌಂಡೇಶನ್ ಮೂಲಕ ಆಹಾರ ಹಾಗೂ ದಿನಸಿ ಸಾಮಾಗ್ರಿಗಳನ್ನು ಒದಗಿಸುತ್ತಿದ್ದಾರೆ.

ಸೋನು ಸೂದ್, ಭೂಮಿ ಪೆಡ್ನೆಕರ್, ಜಾಕ್ವೆಲಿನ್ ಫರ್ನಾಂಡೀಸ್, ಅಕ್ಷಯ್ ಕುಮಾರ್, ವಿಕ್ಕಿ ಕೌಶಲ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವಾರು ಗಣ್ಯರು ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಮಧ್ಯೆ ನಾಗರಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

Advertisement
Advertisement